ಬೋಯಿಂಗ್ ‘737 ಮ್ಯಾಕ್ಸ್’ ವಿಮಾನಗಳ ನಿಷೇಧ ತೆರವು

Update: 2021-02-26 16:42 GMT

  ಸಿಡ್ನಿ (ಆಸ್ಟ್ರೇಲಿಯ), ಫೆ. 26: ಅಮೆರಿಕದ ವಿಮಾನ ತಯಾರಕ ಕಂಪೆನಿ ಬೋಯಿಂಗ್‌ನ ‘737 ಮ್ಯಾಕ್ಸ್’ ಮಾದರಿಯ ವಿಮಾನಗಳ ಮೇಲೆ ಎರಡು ವರ್ಷಗಳಿಂದ ಜಾರಿಯಲ್ಲಿರುವ ನಿಷೇಧವನ್ನು ತೆರವುಗೊಳಿಸುವುದಾಗಿ ಆಸ್ಟ್ರೇಲಿಯದ ನಾಗರಿಕ ವಾಯುಯಾನ ಸುರಕ್ಷಾ ಪ್ರಾಧಿಕಾರ ಶುಕ್ರವಾರ ತಿಳಿಸಿದೆ.

ಏಶ್ಯ-ಪೆಸಿಫಿಕ್ ವಲಯದಲ್ಲಿ ಈ ನಿಷೇಧವನ್ನು ತೆರವುಗೊಳಿಸಿದ ಮೊದಲ ದೇಶ ಆಸ್ಟ್ರೇಲಿಯವಾಗಿದೆ.

‘‘ವಿಮಾನವು ಸುರಕ್ಷಿತವಾಗಿದೆ ಎಂಬ ವಿಶ್ವಾಸ ನಮಗಿದೆ’’ ಎಂದು ಪ್ರಾಧಿಕಾರದ ಉಸ್ತುವಾರಿ ನಿರ್ದೇಶಕ ಗ್ರೇಮ್ ಕ್ರಾಫರ್ಡ್ ಹೇಳಿಕೆಯೊಂದರಲ್ಲಿ ತಿಳಿಸಿದರು.

ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳು ಸಾಮಾನ್ಯ ಸೇವೆಗೆ ಮರಳಲು ಅಮೆರಿಕದ ಕೇಂದ್ರೀಯ ವಾಯುಯಾನ ಆಡಳಿತ (ಎಫ್‌ಎಎ) ನಿಗದಿಪಡಿಸಿರುವ ಮಾನದಂಡಗಳಿಗೆ ಸಹಮತವಿದೆ ಎಂದು ಆಸ್ಟ್ರೇಲಿಯದ ನಾಗರಿಕ ಸುರಕ್ಷಾ ಪ್ರಾಧಿಕಾರ ಹೇಳಿದೆ.

ಆಸ್ಟ್ರೇಲಿಯದ ಯಾವುದೇ ವಿಮಾನಯಾನ ಕಂಪೆನಿಗಳು ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳನ್ನು ಹೊಂದಿಲ್ಲ. ಆದರೆ, ಫಿಜಿ ಏರ್‌ವೇಸ್ ಮತ್ತು ಸಿಂಗಾಪುರ ಏರ್‌ಲೈನ್ಸ್‌ಗೆ ಸೇರಿದ ಈ ಮಾದರಿಯ ವಿಮಾನಗಳು ಆಸ್ಟ್ರೇಲಿಯಕ್ಕೆ ಬರುತ್ತವೆ.

ಈ ಮಾದರಿಯ ಎರಡು ವಿಮಾನಗಳು ಪತನಗೊಂಡ ಬಳಿಕ, 2019 ಮಾರ್ಚ್‌ನಲ್ಲಿ ಈ ವಿಮಾನಗಳನ್ನು ಸೇವೆಯಿಂದ ಹೊರಗಿಡಲಾಗಿತ್ತು.

2018ರ ಅಕ್ಟೋಬರ್‌ನಲ್ಲಿ ಇಂಡೋನೇಶ್ಯದಲ್ಲಿ ಮತ್ತು 2019ರ ಮಾರ್ಚ್‌ನಲ್ಲಿ ಇಥಿಯೋಪಿಯದಲ್ಲಿ ಈ ಮಾದರಿಯ 2 ವಿಮಾನಗಳು ಪತನಗೊಂಡಿದ್ದು, ಒಟ್ಟು 346 ಮಂದಿ ಮೃತಪಟ್ಟಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News