×
Ad

ಭಾರತದಿಂದ ಹತ್ತಿ ಆಮದಿಗೆ ಪಾಕ್ ಆಸಕ್ತಿ: ಶೀಘ್ರದಲ್ಲೇ ನಿರ್ಧಾರ ಘೋಷಣೆ

Update: 2021-02-28 21:14 IST

 ಇಸ್ಲಾಮಾಬಾದ್,ಫೆ.28: ಪುಲ್ವಾಮಾ ದಾಳಿಯ ಬಳಿಕ ಹದಗೆಟ್ಟಿದ್ದ ಭಾರತ-ಪಾಕ್ ದ್ವಿಪಕ್ಷೀಯ ವಾಣಿಜ್ಯ ಬಾಂಧವ್ಯಗಳು, ಇತ್ತೀಚೆಗೆ ಗಡಿನಿಯಂತ್ರಣ ರೇಖೆಯಲ್ಲಿ ಹೊಸತಾಗಿ ಕದನವಿರಾಮ ಒಪ್ಪಂದ ಏರ್ಪಟ್ಟ ಬಳಿಕ, ಹಂತಹಂತವಾಗಿ ಮರುಸ್ಥಾಪನೆಗೊಳ್ಳುವ ಸಾಧ್ಯತೆಗಳು ಉಜ್ವಲವಾಗಿ ಗೋಚರಿಸತೊಡಗಿದೆ.

   ಭಾರತದಿಂದ ಹತ್ತಿ ಹಾಗೂ ಗಿರಣಿನೂಲನ್ನು ಆಮದುಮಾಡಿಕೊಳ್ಳುವ ಬಗ್ಗೆ ಪಾಕಿಸ್ತಾನವು ಮುಂದಿನವಾರ ನಿರ್ಧಾರವೊಂದನ್ನು ಕೈಗೊಳ್ಳುವ ಸಾಧ್ಯತೆಯಿದೆ ಎಂದು ವಾಣಿಜ್ಯ ವಿಷಯಗಳಿಗಾಗಿನ ಪಾಕ್ ಪ್ರಧಾನಿಯವರ ಸಲಹೆಗಾರ ಅಬ್ದುಲ್ ರಝಾಕ್ ದಾವೂದ್ ಅವರು ತಿಳಿಸಿದ್ದಾರೆಂದು ವಾಣಿಜ್ಯ ಸಚಿವಾಲಯದ ಮೂಲಗಳನ್ನು ಉಲ್ಲೇಖಿಸಿ ‘ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ಪತ್ರಿಕೆ ರವಿವಾರ ವರದಿ ಮಾಡಿದೆ.

   ದೇಶದಲ್ಲಿ ಹತ್ತಿಯ ಕೊರತೆಯಿರುವ ಬಗ್ಗೆ ಈಗಾಗಲೇ ವಾಣಿಜ್ಯ ಖಾತೆಯನ್ನು ಕೂಡಾ ನಿರ್ವಹಿಸುತ್ತಿರುವ ಪ್ರಧಾನಿ ಇಮ್ರಾನ್ ಖಾನ್ ಅವರ ಗಮನಕ್ಕೆ ತರಲಾಗಿದೆಯೆಂದು ಅವರು ಹೇಳಿದ್ದಾರೆ. ಭಾರತದಿಂದ ಹತ್ತಿಯನ್ನು ಆಮದು ಮಾಡಿಕೊಳ್ಳುವ ಬಗ್ಗೆ ಪ್ರಮುಖ ನಿರ್ಧಾರವೊಂದನ್ನು ಕೈಗೊಂಡ ಬಳಿಕ ಈ ಬಗ್ಗೆ ಔಪಚಾರಿಕ ಆದೇಶವನ್ನು ಅರ್ಥಿಕ ಸಮನ್ವಯ ಸಮಿತಿಯ ಪರಿಶೀಲನೆಗೆ ಸಲ್ಲಿಸಲಾಗುವುದು ಎಂದು ಪತ್ರಿಕೆ ವರದಿ ಮಾಡಿದೆ.

 ಈ ಬಗ್ಗೆ ವಾಣಿಜ್ಯ ಸಚಿವಾಲಯದಲ್ಲಿ ಆಂತರಿಕ ಸಮಾಲೋಚನೆಗಳು ಈಗಾಗಲೇ ಆರಂಭಗೊಂಡಿದ್ದು, ಪ್ರಧಾನಿಯವರ ಅನುಮೋದನೆ ದೊರೆತ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದೆಂದು ಅವರು ತಿಳಿಸಿದರು.

   ‘‘ಆದರೆ ಈ ಹಂತದಲ್ಲಿ ಈ ಬಗ್ಗೆ ಹೌದು ಅಥವಾ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಸೋಮವಾರದ ವೇಳೆಗೆ ತಾನು ಈ ನಿಟ್ಟಿನಲ್ಲಿ ಉತ್ತರಿಸಲು ಸಾಧ್ಯವಾಗಲಿದೆ’’ ಎಂದು ಅಬ್ದುಲ್ ರಝಾಕ್ ತಿಳಿಸಿದ್ದಾರೆ. ಭಾರತ ಹಾಗೂ ಪಾಕ್ ಜೊತೆಗಿನ ವಾಣಿಜ್ಯ ಬಾಂಧವ್ಯಗಳ ಮರುಸ್ಥಾಪನೆಯಿಂದ ಪಾಕಿಸ್ತಾನದ ವಿವಿಧ ಸಾಮಾಗ್ರಿಗಳ ಉತ್ಪಾದನಾ ವೆಚ್ಚ ಕಡಿಮೆ ಆಗಲಿದೆ ಹಾಗೂ ಆಹಾರವಸ್ತುಗಳು ಸುಸ್ಥಿರವಾಗಿ ಪೂರೈಕೆಯಾಗಲಿವೆ ಎಂದು ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ತಿಳಿಸಿದೆ.

 ಭಾರತದ ಜೊತೆ ವಾಣಿಜ್ಯ ಬಾಂಧವ್ಯ ಸ್ಥಗಿತಗೊಂಡ ಬಳಿಕ ಪಾಕಿಸ್ತಾವು ಹತ್ತಿ ಹಾಗೂ ಗಿರಣಿ ನೂಲನ್ನು ದೂರದ ಅಮೆರಿಕ, ಬ್ರೆಝಿಲ್ ಹಾಗೂ ಉಝ್ಬೆಕಿಸ್ತಾನಗಳಿಂದ ದುಬಾರಿ ಬೆಲೆಗೆ ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಭಾರತದಿಂದ ಹತ್ತಿಯ ಆಮದು ಅತ್ಯಂತ ಅಗ್ಗವಾದುದು ಮಾತ್ರವಲ್ಲದೆ ಕೇವಲ ಮೂರ್ನಾಲ್ಕು ದಿನಗಳೊಳಗೆ ತಲುಪುತ್ತಿತ್ತು. ಗಿರಣಿ ನೂಲಿನ ಆಮದಿನಲ್ಲಿನ ವಿಳಂಬದಿಂದಾಗಿ ಪಾಕಿಸ್ತಾನವು ತನಗೆ ದೊರೆಯುತ್ತಿದ್ದ ರಫ್ತು ಆರ್ಡರ್‌ಗಳನ್ನು ಸಕಾಲಿಕವಾಗಿ ಪೂರೈಕೆ ಮಾಡಲು ಸಾಧ್ಯವಾಗುತ್ತಿರಲಿಲ್ಲ.ಭಾರತದಿಂದ ಹತ್ತಿ ಹಾಗೂ ಗಿರಣಿ ನೂಲನ್ನು ಆಮದು ಮಾಡುವಂತೆ ಪಾಕಿಸ್ತಾನದ ಜವಳಿ ಮಿಲ್‌ಗಳ ಸಂಘವು (ಅಪ್ತಮಾ), ಪಾಕ್ ಸರಕಾರದ ಮೇಲೆ ತೀವ್ರ ಒತ್ತಡವನ್ನು ಹೇರುತ್ತಿದೆಯೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News