×
Ad

ಪಾಕ್ ಸಾಗರ ಪ್ರದೇಶ ಪ್ರವೇಶಿಸಿದ 17 ಭಾರತೀಯ ಬೆಸ್ತರ ಬಂಧನ

Update: 2021-02-28 21:27 IST
ಸಾಂದರ್ಭಿಕ ಚಿತ್ರ

  ಕರಾಚಿ,ಫೆ.28: ಪಾಕಿಸ್ತಾನದ ಸಾಗರ ಪ್ರದೇಶದಲ್ಲಿ ಸಂಚರಿಸುತ್ತಿತ್ತೆನ್ನಲಾದ ಮೂರು ಭಾರತೀಯ ಮೀನುಗಾರಿಕಾ ದೋಣಿಗಳನ್ನು ಪಾಕಿಸ್ತಾನ ವಶಪಡಿಸಿಕೊಂಡಿದ್ದು, ಅವುಗಳಲ್ಲಿದ್ದ ಒಟ್ಟು 17 ಭಾರತೀಯ ಮೀನುಗಾರರನ್ನು ಬಂಧಿಸಿದೆ.

 ಈ ಮೀನುಗಾರರನ್ನು ಶುಕ್ರವಾರ ಬಂಧಿಸಲಾಗಿದ್ದು, ಅವರನ್ನು ಶನಿವಾರ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ ಹಾಗೂ ಆನಂತರ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಪಾಕಿಸ್ತಾನದ ಸಾಗರಯಾನ ಭದ್ರತಾ ಏಜೆನ್ಸಿಯ ವಕ್ತಾರರು ತಿಳಿಸಿದ್ದಾರೆ.

 ಪಾಕಿಸ್ತಾನಕ್ಕೆ ಸೇರಿದ ಸಾಗರಪ್ರದೇಶದೊಳಗೆ ಪ್ರವೇಶಿಸಿರುವ ಬಗ್ಗೆ ಭಾರತೀಯ ಮೀನುಗಾರರಿಗೆ ಎಚ್ಚರಿಕೆ ನೀಡಿದ್ದರೂ ಅವರದಕ್ಕೆ ಕಿವಿಗೊಡಲಿಲ್ಲವೆಂದು ಪಾಕ್ ಅಧಿಕಾರಿಗಳು ತಿಳಿಸಿದ್ದಾರೆ. ಸರ್‌ಕ್ರೀಕ್ ಸಮೀಪದ ಪಾಕ್ ಸಾಗರಪ್ರದೇಶದ 15 ನಾಟಿಕಲ್ ಮೈಲು ದೂರದಷ್ಟು ಒಳಗಡೆ ಆಗಮಿಸಿದ್ದ ಭಾರತೀಯ ಮೀನುಗಾರರನ್ನು ಕ್ಷಿಪ್ರ ಪ್ರತಿಕ್ರಿಯಾ ದೋಣಿಗಳನ್ನು ಬಳಸಿಕೊಳ್ಳಲಾಗಿದೆಯೆಂದು ವಕ್ತಾರರು ತಿಳಿಸಿದ್ದಾರೆ.

  ಬಂಧಿತ ಭಾರತೀಯ ಮೀನುಗಾರರನ್ನು ಕರಾಚಿಯ ಮಾಲಿರ್ ಅಥವಾ ಲಾಂಧಿ ಜೈಲಿಗೆ ಕಳುಹಿಸಲಾಗಿದೆಯೆಂದು ಮೂಲಗಳು ತಿಳಿಸಿವೆ. ಕಳೆದ ವರ್ಷ ಪಾಕಿಸ್ತಾನವು 23 ಮಂದಿ ಭಾರತೀಯ ಮೀನುಗಾರರನ್ನು ಬಂಧಿಸಿದ್ದು, ಅವರ ನಾಲ್ಕು ಮೀನುಗಾರಿಕಾ ದೋಣಿಗಳನ್ನು ವಶಕ್ಕೆ ತೆಗೆದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News