2024ರಲ್ಲಿ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುವ ಸೂಚನೆ ನೀಡಿದ ಟ್ರಂಪ್

Update: 2021-03-01 15:29 GMT

ವಾಶಿಂಗ್ಟನ್, ಮಾ. 1: ಜನವರಿಯಲ್ಲಿ ಅಧಿಕಾರದಿಂದ ಕೆಳಗಿಳಿದ ಬಳಿಕ, ಮೊದಲ ಬಾರಿಗೆ ಸಾರ್ವಜನಿಕವಾಗಿ ಭಾಷಣ ಮಾಡಿದ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಾನು 2024ರಲ್ಲಿ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಬಹುದು ಎಂಬ ಸೂಚನೆಯನ್ನು ನೀಡಿದ್ದಾರೆ ಹಾಗೂ ತನ್ನ ರಿಪಬ್ಲಿಕನ್ ಪಕ್ಷದಲ್ಲಿ ಒಗ್ಗಟ್ಟಿಗಾಗಿ ಕರೆ ನೀಡಿದ್ದಾರೆ.

ಅದೇ ವೇಳೆ, ಪ್ರಸಕ್ತ ಬೈಡನ್ ಸರಕಾರವು ‘ಉದ್ಯೋಗ-ವಿರೋಧಿ’ ಮತ್ತು ‘ವಿಜ್ಞಾನ-ವಿರೋಧಿ’ಯಾಗಿದೆ ಎಂದು ಅವರು ಆರೋಪಿಸಿದರು.

‘‘ಹೌಸ್ ಆಫ್ ರೆಪ್ರೆಸೆಂಟೇಟಿವ್ಸನ್ನು ನಾವು ಮತ್ತೆ ವಶಪಡಿಸಿಕೊಳ್ಳುತ್ತೇವೆ. ಸೆನೆಟನ್ನು ನಾವು ಗೆಲ್ಲುತ್ತೇವೆ. ಬಳಿಕ ರಿಪಬ್ಲಿಕನ್ ಪಕ್ಷದ ಅಧ್ಯಕ್ಷರು ಶ್ವೇತಭವನವನ್ನು ಪ್ರವೇಶಿಸುತ್ತಾರೆ. ಅದು ಯಾರು ಎನ್ನುವ ಬಗ್ಗೆ ನನಗೆ ಕುತೂಹಲವಿದೆ’’ ಎಂದು ಫ್ಲೋರಿಡದ ಒರ್ಲಾಂಡೊ ನಗರದಲ್ಲಿ ಕನ್ಸರ್ವೇಟಿವ್ ಪೊಲಿಟಿಕಲ್ ಆ್ಯಕ್ಷನ್ ಕಮಿಟಿಯ ವಾರ್ಷಿಕ ಅಧಿವೇಶನದಲ್ಲಿ ತನ್ನ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು ಹೇಳಿದರು.

ಆದರೆ, 2024ರಲ್ಲಿ ಅಧ್ಯಕ್ಷ ಹುದ್ದೆಗೆ ನಾನು ಸ್ಪರ್ಧಿಸುತ್ತೇನೆ ಎಂದು ನೇರವಾಗಿ ಟ್ರಂಪ್ ಹೇಳಲಿಲ್ಲವಾದರೂ, ತನ್ನ ಭಾಷಣದುದ್ದಕ್ಕೂ ಅವರು ಈ ನಿಟ್ಟಿನಲ್ಲಿ ಹಲವು ಸೂಚನೆಗಳನ್ನು ನೀಡಿದರು.

ಆದರೆ, ತಾನು ಹೊಸ ಪಕ್ಷವೊಂದನ್ನು ರಚಿಸುವ ಸಾಧ್ಯತೆಯನ್ನು ಅವರು ತಳ್ಳಿಹಾಕಿದರು. ಇದು ಸಂಪ್ರದಾಯವಾದಿಗಳ (ಕನ್ಸರ್ವೇಟಿವ್ಸ್) ಮತ ವಿಭಜನೆಗೆ ಕಾರಣವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News