ಚಾಡ್‌ವಿಕ್ ಬೋಸ್‌ಮನ್‌ಗೆ ಮರಣೋತ್ತರ ಶ್ರೇಷ್ಠ ನಟ ಪ್ರಶಸ್ತಿ

Update: 2021-03-01 15:38 GMT
ಫೋಟೊ ಕೃಪೆ:twitter.com

ಲಾಸ್ ಏಂಜಲಿಸ್ (ಅಮೆರಿಕ), ಮಾ. 1: ‘ಗೋಲ್ಡನ್ ಗ್ಲೋಬ್ಸ್ 2021’ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ರವಿವಾರ ರಾತ್ರಿ ನಡೆಯಿತು. ಕೊರೋನ ವೈರಸ್ ಸಾಂಕ್ರಾಮಿಕದ ಬೆದರಿಕೆಯ ಹಿನ್ನೆಲೆಯಲ್ಲಿ ಸಮಾರಂಭವನ್ನು ಸರಳವಾಗಿ ಲಾಸ್ ಏಂಜಲಿಸ್ ಮತ್ತು ನ್ಯೂಯಾರ್ಕ್‌ಗಳಲ್ಲಿ ನಡೆಸಲಾಯಿತು. ನಾಮ ನಿರ್ದೇಶಿತರು ತಮ್ಮ ಮನೆಗಳಿಂದಲೇ ಕಾರ್ಯಕ್ರಮವನ್ನು ವೀಕ್ಷಿಸಿದರು.

 ಟೀನಾ ಫೇ ಮತ್ತು ಆ್ಯಮಿ ಪೋಹ್ಲರ್ ಕ್ರಮವಾಗಿ ನ್ಯೂಯಾರ್ಕ್‌ನ ರೇನ್‌ಬೋ ಕೋಣೆ ಮತ್ತು ಬೆವರ್ಲಿ ಹಿಲ್ಸ್‌ನಲ್ಲಿರುವ ಬೆವರ್ಲಿ ಹಿಲ್ಟನ್ ಹೊಟೇಲ್‌ನಿಂದ ಕಾರ್ಯಕ್ರಮಗಳನ್ನು ನಿರೂಪಿಸಿದರು.

 ಚಲನಚಿತ್ರ ವಿಭಾಗದಲ್ಲಿ ಚಾಡ್‌ವಿಕ್ ಬೋಸ್‌ಮನ್‌ಗೆ ‘ಮಾ ರೇನೀಸ್ ಬ್ಲಾಕ್ ಬಾಟಮ್’ ಚಿತ್ರದ ಅಭಿನಯಕ್ಕಾಗಿ ಶ್ರೇಷ್ಠ ನಟ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಯಿತು. 2018ರಲ್ಲಿ ‘ಬ್ಲಾಕ್ ಪ್ಯಾಂಥರ್’ ಚಿತ್ರದಲ್ಲಿ ‘ಬ್ಲಾಕ್ ಪ್ಯಾಂಥರ್’ ಆಗಿ ನಟಿಸಿದ್ದ ಚಾಡ್‌ವಿಕ್ ಕಳೆದ ವರ್ಷ ಕ್ಯಾನ್ಸರ್‌ನಿಂದಾಗಿ ಮೃತಪಟ್ಟಿದ್ದಾರೆ. ಅವರಿಗೆ 43 ವರ್ಷ ವಯಸ್ಸಾಗಿತ್ತು.

‘ದ ಕ್ರೌನ್’ ಚಿತ್ರಕ್ಕೆ ನಾಲ್ಕು ಪ್ರಶಸ್ತಿಗಳು ಲಭಿಸಿದವು. ಅದನ್ನು ಆರು ಪ್ರಶಸ್ತಿಗಳಿಗೆ ನಾಮನಿರ್ದೇಶನ ಮಾಡಲಾಗಿತ್ತು.

 ‘ನೋಮಡ್‌ಲ್ಯಾಂಡ್’ ಚಿತ್ರವು ಶ್ರೇಷ್ಠ ಚಿತ್ರ (ಡ್ರಾಮ) ಮತ್ತು ಶ್ರೇಷ್ಠ ನಿರ್ದೇಶಕ ಪ್ರಶಸ್ತಿಗಳನ್ನು ಗೆದ್ದಿತು. ಅದನ್ನು ಕ್ಲೋ ಝಾವೊ ನಿರ್ದೇಶಿಸಿದ್ದಾರೆ.

ವಿವಾದಾತ್ಮಕ ‘ಬೋರಟ್ ಸಬ್ಸಿಕ್ವೆಂಟ್ ಮೂವೀಫಿಲ್ಮ್’ ಎರಡು ಪ್ರಶಸ್ತಿಗಳನ್ನು ಗೆದ್ದಿತು: ಅವುಗಳೆಂದರೆ: ಶ್ರೇಷ್ಠ ಚಿತ್ರ (ಮ್ಯೂಸಿಕಲ್/ಕಾಮಿಡಿ) ಮತ್ತು ಶ್ರೇಷ್ಠ ನಟ (ಮ್ಯೂಸಿಕಲ್/ಕಾಮಿಡಿ). ಇದರ ಶ್ರೇಷ್ಠ ನಟ ಪ್ರಶಸ್ತಿಯನ್ನು ಪಡೆದವರು ಸ್ಯಾಕ ಬ್ಯಾರನ್ ಕೋಹನ್.

ಟೆಲಿವಿಶನ್ ವಿಭಾಗದಲ್ಲಿ ಶ್ರೇಷ್ಠ ಟಿವಿ ಧಾರಾವಾಹಿ (ಡ್ರಾಮ) ಪ್ರಶಸ್ತಿಯನ್ನು ‘ದ ಕ್ರೌನ್’ ಗೆದ್ದಿದೆ. ಅದೇ ವೇಳೆ, ಶ್ರೇಷ್ಠ ಟಿವಿ ಧಾರಾವಾಹಿ (ಮ್ಯೂಸಿಕಲ್/ಕಾಮಿಡಿ) ಪ್ರಶಸ್ತಿ ‘ಶಿಟ್ಸ್ ಕ್ರೀಕ್’ಗೆ ಲಭಿಸಿದೆ.

ಚಲನಚಿತ್ರ ವಿಭಾಗದ ವಿಜೇತರ ಪಟ್ಟಿ

ಶ್ರೇಷ್ಠ ಚಿತ್ರ (ಡ್ರಾಮ): ನೋಮಡ್‌ಲ್ಯಾಂಡ್

ಶ್ರೇಷ್ಠ ಚಿತ್ರ (ಮ್ಯೂಸಿಕಲ್/ಕಾಮಿಡಿ): ಬೋರಟ್ ಸಬ್ಸಿಕ್ವೆಂಟ್ ಮೂವೀಫಿಲ್ಮ್

ಶ್ರೇಷ್ಠ ನಿರ್ದೇಶಕ: ಕ್ಲೋ ಝಾವೊ (ನೋಮಡ್‌ಲ್ಯಾಂಡ್ ಚಿತ್ರಕ್ಕಾಗಿ)

ಶ್ರೇಷ್ಠ ನಟಿ (ಡ್ರಾಮ): ಆ್ಯಂಡ್ರಾ ಡೇ (ದ ಯುನೈಟೆಡ್ ಸ್ಟೇಟ್ಸ್ ವರ್ಸಸ್ ಬಿಲ್ಲೀ ಹಾಲಿಡೇ ಚಿತ್ರಕ್ಕಾಗಿ)

ಶ್ರೇಷ್ಠ ನಟ (ಡ್ರಾಮ): ಚಾಡ್‌ವಿಕ್ ಬೋಸ್‌ಮನ್ (ಮಾ ರೇನೀಸ್ ಬ್ಲಾಕ್ ಬಾಟಮ್ ಚಿತ್ರಕ್ಕಾಗಿ)

ಶ್ರೇಷ್ಠ ನಟಿ (ಮ್ಯೂಸಿಕಲ್/ಕಾಮಿಡಿ): ರೊಸಮಂಡ್ ಪೈಕ್ (ಐ ಕೇರ್ ಅ ಲಾಟ್ ಚಿತ್ರದಲ್ಲಿನ ನಟನೆಗಾಗಿ)

 ಶ್ರೇಷ್ಠ ನಟ (ಮ್ಯೂಸಿಕಲ್ ಕಾಮಿಡಿ): ಸ್ಯಾಕ ಬ್ಯಾರನ್ ಕೋಹನ್ (ಬೋರಟ್ ಸಬ್ಸಿಕ್ವೆಂಟ್ ಮೂವೀಫಿಲ್ಮ್ ಚಿತ್ರಕ್ಕಾಗಿ)

ಶ್ರೇಷ್ಠ ಪೋಷಕ ನಟಿ: ಜೋಡೀ ಫಾಸ್ಟರ್ (ದ ಮಾರಿಟಾನಿಯನ್ ಚಿತ್ರಕ್ಕಾಗಿ)

ಶ್ರೇಷ್ಠ ಪೋಷಕ ನಟ: ಡೇನಿಯಲ್ ಕಲೂಯ (ಜುಡಾಸ್ ಆ್ಯಂಡ್ ದ ಬ್ಲಾಕ್ ಮೇಸಯ್ಯ ಚಿತ್ರಕ್ಕಾಗಿ)

ಶ್ರೇಷ್ಠ ಚಿತ್ರಕತೆ: ಆ್ಯರನ್ ಸೊರ್ಕಿನ್ (ದ ಟ್ರಯಲ್ ಆಫ್ ದ ಶಿಕಾಗೊ 7 ಚಿತ್ರಕ್ಕಾಗಿ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News