ಸೀರಮ್ ಇನ್‌ಸ್ಟಿಟ್ಯೂಟ್, ಭಾರತ್ ಬಯೊಟೆಕ್ ಗುರಿಯಾಗಿಸಿಕೊಂಡು ಚೀನಿ ಹ್ಯಾಕರ್‌ಗಳ ದಾಳಿ

Update: 2021-03-01 16:48 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಮಾ.1: ಚೀನಾ ಸರಕಾರದ ಬೆಂಬಲಿತ ಹ್ಯಾಕಿಂಗ್ ಗುಂಪೊಂದು ಭಾರತದಲ್ಲಿ ಕೊರೋನವೈರಸ್ ವಿರುದ್ಧ ಲಸಿಕೆಗಳನ್ನು ತಯಾರಿಸುತ್ತಿರುವ ಸೀರಮ್ ಇನ್‌ಸ್ಟಿಟ್ಯೂಟ್ ಮತ್ತು ಭಾರತ್ ಬಯೊಟೆಕ್ ಕಂಪನಿಗಳನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ನಡೆಸುತ್ತಿದೆ ಎಂದು ಸೈಬರ್ ಬೇಹುಗಾರಿಕೆ ಸಂಸ್ಥೆ ಸೈಫರ್ಮಾ ತಿಳಿಸಿದೆ. ಗೋಲ್ಡ್‌ಮನ್ ಸ್ಯಾಚ್ಸ್ ಬೆಂಬಲಿತ ಸೈಫರ್ಮಾ ಸಿಂಗಪೂರ ಮತ್ತು ಟೋಕಿಯೊಗಳಲ್ಲಿ ನೆಲೆಗಳನ್ನು ಹೊಂದಿದೆ.

ಚೀನಾ ಮತ್ತು ಭಾರತ ಹಲವಾರು ದೇಶಗಳಿಗೆ ಕೋವಿಡ್-19 ಲಸಿಕೆಗಳನ್ನು ಮಾರಾಟ ಮಾಡಿವೆ ಅಥವಾ ಉಚಿತವಾಗಿ ಪೂರೈಸಿವೆ. ವಿಶ್ವದಲ್ಲಿ ಲಭ್ಯ ಲಸಿಕೆಗಳಲ್ಲಿ ಭಾರತದ ಪಾಲು ಶೇ.60ಕ್ಕೂ ಹೆಚ್ಚಿದೆ.

‘ಸ್ಟೋನ್ ಪಂಡಾ ’ಎಂದೂ ಕರೆಯಲಾಗುವ ಚೀನಿ ಹ್ಯಾಕಿಂಗ್ ಗುಂಪು ಎಪಿಟಿ10 ಭಾರತ ಬಯೋಟೆಕ್ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಐಟಿ ಮೂಲಸೌಕರ್ಯ ಮತ್ತು ಪೂರೈಕೆ ಸರಪಳಿ ಸಾಫ್ಟ್‌ವೇರ್‌ನಲ್ಲಿ ಲೋಪಗಳನ್ನು ಮತ್ತು ದೌರ್ಬಲ್ಯಗಳನ್ನು ಗುರುತಿಸಿದೆ ಎಂದು ಸೈಫರ್ಮಾ ತಿಳಿಸಿದೆ.

 ಬೌದ್ಧಿಕ ಆಸ್ತಿಗಳ ಕಳ್ಳತನ ಮತ್ತು ಭಾರತೀಯ ಔಷಧಿ ತಯಾರಿಕೆ ಕಂಪನಿಗಳಿಗಿಂತ ಹೆಚ್ಚಿನ ಸ್ಪರ್ಧಾತ್ಮಕ ಲಾಭವನ್ನು ಪಡೆಯುವುದು ಈ ಕುತಂತ್ರದ ನಿಜವಾದ ಉದ್ದೇಶವಾಗಿದೆ ಎಂದು ಸೈಫರ್ಮಾದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕುಮಾರ ರಿತೇಶ್ ಹೇಳಿದರು.

ಎಪಿಟಿ10 ಸಕ್ರಿಯವಾಗಿ ಸೀರಮ್ ಅನ್ನು ಗುರಿಯಾಗಿಸಿಕೊಳ್ಳುತ್ತಿದೆ. ಕಂಪನಿಯ ಹಲವಾರು ಪಬ್ಲಿಕ್ ಸರ್ವರ್‌ಗಳು ದುರ್ಬಲವಾಗಿವೆ ಎನ್ನುವುದು ಅವರಿಗೆ ಗೊತ್ತಾಗಿದೆ. ದುರ್ಬಲ ವೆಬ್ ಅಪ್ಲಿಕೇಷನ್ ಹಾಗೂ ದುರ್ಬಲ ಕಂಟೆಂಟ್ ಮ್ಯಾನೇಜ್‌ಮೆಂಟ್ ಸಿಸ್ಟಮ್‌ನ ಬಗ್ಗೆಯೂ ಅವರು ಮಾತನಾಡಿದ್ದಾರೆ. ಇದು ಎಚ್ಚರಿಕೆಯ ಗಂಟೆಯನ್ನು ಮೊಳಗಿಸಿದೆ ಎಂದು ಹ್ಯಾಕರ್‌ಗಳನ್ನು ಪ್ರಸ್ತಾಪಿಸಿ ರಿತೇಶ್ ಹೇಳಿದರು.

ಭಾರತದಲ್ಲಿ ಆಸ್ಟ್ರಾಝೆನೆಕಾದ ಕೋವಿಶೀಲ್ಡ್ ಲಸಿಕೆಯನ್ನು ತಯಾರಿಸುತ್ತಿರುವ ಸೀರಮ್ ಕಂಪೆನಿ ಸದ್ಯವೇ ಅಮೆರಿಕದ ನೊವೊವ್ಯಾಕ್ಸ್ ಕಂಪನಿಯು ಅಭಿವೃದ್ಧಿಗೊಳಿಸಿರುವ ಕೊರೋನವೈರಸ್ ಲಸಿಕೆಯ ಸಗಟು ತಯಾರಿಕೆಯನ್ನು ಆರಂಭಿಸಲಿದೆ.

ಸೈಫರ್ಮಾದ ವರದಿಗೆ ಚೀನಿ ವಿದೇಶಾಂಗ ಸಚಿವಾಲಯವು ತಕ್ಷಣಕ್ಕೆ ಪ್ರತಿಕ್ರಿಯಿಸಿಲ್ಲ. ಸೀರಮ್ ಮತ್ತು ಭಾರತ ಬಯೊಟೆಕ್ ಕೂಡ ಪ್ರತಿಕ್ರಿಯಿಸಲು ನಿರಾಕರಿಸಿವೆ. ಭಾರತ,ಕೆನಡಾ,ಫ್ರಾನ್ಸ್,ದಕ್ಷಿಣ ಕೊರಿಯಾ ಮತ್ತು ಅಮೆರಿಕದ ಕೋವಿಡ್-19 ಲಸಿಕೆ ತಯಾರಿಕೆ ಕಂಪನಿಗಳನ್ನು ಗುರಿಯಾಗಿಸಿ ಕೊಂಡು ರಷ್ಯಾ ಮತ್ತು ಉತ್ತರ ಕೊರಿಯಾದಿಂದ ಸೈಬರ್ ದಾಳಿಗಳನ್ನು ತಾನು ಪತ್ತೆ ಹಚ್ಚಿರುವುದಾಗಿ ಮೈಕ್ರೋಸಾಫ್ಟ್ ಕಳೆದ ವರ್ಷದ ನವಂಬರ್‌ನಲ್ಲಿ ಹೇಳಿತ್ತು.

 ಚೀನಿ ಹ್ಯಾಕರ್‌ಗಳು ಭಾರತೀಯ ಕಂಪನಿಗಳಿಂದ ಲಸಿಕೆ ಸಂಬಂಧಿತ ಯಾವ ಮಾಹಿತಿಯನ್ನು ಕದ್ದಿರಬಹುದು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ರಿತೇಶ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News