×
Ad

ನೈಜೀರಿಯ: ಅಪಹರಿಸಲಾಗಿದ್ದ ಎಲ್ಲ 279 ವಿದ್ಯಾರ್ಥಿನಿಯರ ಬಿಡುಗಡೆ; ಗವರ್ನರ್ ಘೋಷಣೆ

Update: 2021-03-02 22:07 IST

ಗುಸವು (ನೈಜೀರಿಯ), ಮಾ. 2: ನೈಜೀರಿಯದ ಝಂಫರ ರಾಜ್ಯದ ವಸತಿ ಶಾಲೆಯೊಂದರಿಂದ ಅಪಹರಿಸಲಾಗಿದ್ದ ಎಲ್ಲ 279 ವಿದ್ಯಾರ್ಥಿನಿಯರು ಬಿಡುಗಡೆಯಾಗಿದ್ದಾರೆ ಹಾಗೂ ಅವರು ಈಗ ಸರಕಾರದ ವಶದಲ್ಲಿದ್ದಾರೆ ಎಂದು ರಾಜ್ಯದ ಗವರ್ನರ್ ಬೆಲ್ಲೊ ಮಟವಾಲೆ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

‘‘ಬಾಲಕಿಯರು ಸ್ವತಂತ್ರರಾಗಿದ್ದಾರೆ ಎಂದು ಘೋಷಿಸಲು ನಾನು ಸಂತೋಷಪಡುತ್ತೇನೆ. ಅವರು ಈಗಷ್ಟೇ ಸರಕಾರಿ ಭವನಕ್ಕೆ ಬಂದಿದ್ದಾರೆ ಹಾಗೂ ಆರೋಗ್ಯವಾಗಿದ್ದಾರೆ’’ ಎಂದು ಅವರು ಹೇಳಿದರು.

ನೂರಾರು ಬಂದೂಕುಧಾರಿಗಳು ಶುಕ್ರವಾರ ಜಂಗೆಬೆ ಗ್ರಾಮದಲ್ಲಿರುವ ಸರಕಾರಿ ಬಾಲಕಿಯರ ಹೈಸ್ಕೂಲ್‌ಗೆ ದಾಳಿ ನಡೆಸಿ ವಿದ್ಯಾರ್ಥಿನಿಯರನ್ನು ಅಪಹರಿಸಿದ್ದರು. 317 ಬಾಲಕಿಯರನ್ನು ಅಪಹರಿಸಲಾಗಿತ್ತು ಎಂಬುದಾಗಿ ಅಧಿಕಾರಿಗಳು ಆರಂಭದಲ್ಲಿ ತಿಳಿಸಿದ್ದರು.

ಆದರೆ ಅಪಹರಣಕ್ಕೊಳಗಾದ ವಿದ್ಯಾರ್ಥಿನಿಯರ ಒಟ್ಟು ಸಂಖ್ಯೆ 279 ಎಂದು ಮಟವಾಲೆ ಈಗ ಹೇಳಿದ್ದಾರೆ.

ವಾಯುವ್ಯ ಮತ್ತು ಮಧ್ಯ ನೈಜೀರಿಯದಲ್ಲಿ ಭಾರೀ ಶಸ್ತ್ರಸಜ್ಜಿತ ಗುಂಪುಗಳು ಒತ್ತೆಹಣಕ್ಕಾಗಿ ಜನರನ್ನು ಅಪಹರಿಸುತ್ತಿವೆ ಹಾಗೂ ದರೋಡೆ ನಡೆಸುತ್ತಿವೆ.

2016ರಲ್ಲಿ ಆ ಪ್ರದೇಶಗಳಲ್ಲಿ ಸೇನೆಯನ್ನು ನಿಯೋಜಿಸಲಾಗಿತ್ತು. 2019ರಲ್ಲಿ ದರೋಡೆಕೋರರೊಂದಿಗೆ ಶಾಂತಿ ಒಪ್ಪಂದ ನಡೆದಿದೆ. ಆದರೆ, ದಾಳಿಗಳು ಮುಂದುವರಿದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News