ನಾಲ್ಕನೇ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಭಾರತ 294/7

Update: 2021-03-05 11:56 GMT

 ಅಹಮದಾಬಾದ್, ಮಾ.5: ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಶತಕ ಹಾಗೂ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಔಟಾಗದೆ ಗಳಿಸಿರುವ ಅರ್ಧಶತಕದ ಕೊಡುಗೆಯ ನೆರವಿನಿಂದ ಭಾರತ ತಂಡ ಇಂಗ್ಲೆಂಡ್ ವಿರುದ್ಧದ 4ನೇ ಹಾಗೂ ಅಂತಿಮ ಟೆಸ್ಟ್‌ನ ಎರಡನೇ ದಿನದಾಟದಂತ್ಯಕ್ಕೆ 7 ವಿಕೆಟ್ ಗಳ ನಷ್ಟಕ್ಕೆ 294 ರನ್ ಗಳಿಸಿದೆ.

ಇಂಗ್ಲೆಂಡ್ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 205 ರನ್‌ಗೆ ನಿಯಂತ್ರಿಸಿದ್ದ ಭಾರತ 1 ವಿಕೆಟ್ ನಷ್ಟಕ್ಕೆ 24 ರನ್‌ನಿಂದ ಇಂದು ಬ್ಯಾಟಿಂಗ್ ಮುಂದುವರಿಸಿತು. ಚೇತೇಶ್ವರ ಪೂಜಾರ(17)ಹಾಗೂ ನಾಯಕ ವಿರಾಟ್ ಕೊಹ್ಲಿ(0)ಬೆನ್ನುಬೆನ್ನಿಗೆ ವಿಕೆಟ್ ಒಪ್ಪಿಸಿದರು. ಅಜಿಂಕ್ಯ ರಹಾನೆ(27) ದೊಡ್ಡ ಮೊತ್ತ ಗಳಿಸಲು ವಿಫಲರಾದರು. ರೋಹಿತ್ ಶರ್ಮಾ 49 ರನ್ ಗಳಿಸಿ ಔಟಾದರು. ರವಿಚಂದ್ರನ್ ಅಶ್ವಿನ್(13)ಕೂಡ ಬೇಗನೆ ಔಟಾದಾಗ ಭಾರತದ ಸ್ಕೋರ್ 6 ವಿಕೆಟ್‌ಗಳ ನಷ್ಟಕ್ಕೆ 146.

 ಆಗ ತಂಡಕ್ಕೆ ಆಸರೆಯಾಗಿ ನಿಂತವರು ರಿಷಭ್ ಪಂತ್ ಹಾಗೂ ಸುಂದರ್. ಈ ಇಬ್ಬರು 7ನೇ ವಿಕೆಟ್ ಗೆ 113 ರನ್ ಸೇರಿಸಿ ತಂಡವನ್ನು ಆಧರಿಸಿದರು. ರಿಷಭ ಪಂತ್ 115 ಎಸೆತಗಳಲ್ಲಿ 13 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಸಹಾಯದಿಂದ ಮೂರನೇ ಟೆಸ್ಟ್ ಶತಕ ಸಿಡಿಸಿದರು. ಆದರೆ ಶತಕ ಸಿಡಿಸಿದ ಬೆನ್ನಿಗೆ ಆ್ಯಂಡರ್ಸನ್ ಗೆ ವಿಕೆಟ್ ಒಪ್ಪಿಸಿದರು.

ದಿನದಾಟದಂತ್ಯಕ್ಕೆ ಸುಂದರ್(ಔಟಾಗದೆ 60, 117 ಎಸೆತ)ಹಾಗೂ ಅಕ್ಷರ್ ಪಟೇಲ್(ಔಟಾಗದೆ 11)ಕ್ರೀಸ್ ಕಾಯ್ದುಕೊಂಡಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್ ನಷ್ಟಕ್ಕೆ 294 ರನ್ ಗಳಿಸಿರುವ ಭಾರತವು ಒಟ್ಟು 89 ರನ್ ಮುನ್ನಡೆಯಲ್ಲಿದೆ.

ಇಂಗ್ಲೆಂಡ್ ಪರವಾಗಿ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ (3-40)ಯಶಸ್ವಿ ಬೌಲರ್ ಎನಿಸಿಕೊಂಡರು. ಬೆನ್ ಸ್ಟೋಕ್ಸ್(2-73) ಹಾಗೂ ಜಾಕ್ ಲೀಚ್(2-66)ತಲಾ 2 ವಿಕೆಟ್‌ಗಳನ್ನು ಕಬಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News