ಭಾರತದ ಅಥ್ಲೆಟಿಕ್ಸ್ ಕೋಚ್ ನಿಕೊಲಯ್ ಪಟಿಯಾಲದ ಹಾಸ್ಟೆಲ್ ಕೊಠಡಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

Update: 2021-03-05 16:09 GMT

ಪಟಿಯಾಲ, ಮಾ.5: ಭಾರತದ ಮಧ್ಯಮ ಹಾಗೂ ದೂರ ಅಂತರದ ಓಟದ ಕೋಚ್, ಬೆಲಾರಸ್ ನ ನಿಕೊಲಯ್ ಸ್ನೆಸರೆವ್ ಅವರು ಭಾರತದ ಅಥ್ಲೆಟಿಕ್ಸ್ ಒಕ್ಕೂಟದ ರಾಷ್ಟ್ರೀಯ ಕ್ರೀಡೆಗಳ ಸಂಸ್ಥೆಯ ಹಾಸ್ಟೆಲ್ ಕೊಠಡಿಯಲ್ಲಿ ಶುಕ್ರವಾರ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

  72ರ ಹರೆಯದ ಸ್ನೆಸರೆವ್ ಅವರ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಸರಕಾರಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದ್ದು, ಸಾವಿಗೆ ಕಾರಣ ಏನೆಂದು ಗೊತ್ತಾಗಿಲ್ಲ.

"ಅವರು ಇಂದು ನಡೆದ ಇಂಡಿಯನ್ ಗ್ರಾನ್‌ಪ್ರಿ 3ಗಾಗಿ ಬೆಂಗಳೂರಿನಿಂದ ಎನ್ ಐಎಸ್‌ಗೆ ಬಂದಿದ್ದರು. ಆದರೆ ಅವರು ಕ್ರೀಡಾಕೂಟಕ್ಕೆ ಬಂದಿರಲಿಲ್ಲ. ಸಂಜೆ ವೇಳೆ ಕೋಚ್‌ಗಳು ಅವರಿಗಾಗಿ ಹುಡುಕಾಟ ನಡೆಸಿದಾಗ ಅವರ ಕೊಠಡಿ ಒಳಗಿನಿಂದ ಲಾಕ್ ಆಗಿತ್ತು. ಬಾಗಿಲನ್ನು ಒಡೆದು ನೋಡಿದಾಗ ಸ್ನೆಸರೆವ್ ಬೆಡ್ ಮೇಲೆ ಮಲಗಿದ್ದ ಸ್ಥಿತಿಯಲ್ಲಿ ಕಂಡುಬಂದಿದ್ದು, ಅವರನ್ನು ಪರೀಕ್ಷಿಸಿದ ಭಾರತ ಕ್ರೀಡಾ ಪ್ರಾಧಿಕಾರದ ವೈದ್ಯರು ಮೃತಪಟ್ಟಿರುವುದಾಗಿ ಪ್ರಕಟಿಸಿದರು. ಸಾಯ್ ನ ಈಡಿ ತಂಡವು ಸ್ನೆಸರೆವ್ ಮೃತದೇಹವನ್ನು ಶವಪರೀಕ್ಷೆಗಾಗಿ ಸರಕಾರಿ ಆಸ್ಪತ್ರೆಗೆ ಕಳುಹಿಸುವಂತೆ ಸೂಚಿಸಿತು''ಎಂದು ಎಎಫ್‌ಐ ಅಧ್ಯಕ್ಷ ಅದಿಲ್ಲೆ ಸುಮರಿವಾಲಾ ಪಿಟಿಐಗೆ ತಿಳಿಸಿದ್ದಾರೆ.

ಸ್ನೆಸರೆವ್ ಅವರು 3,000 ಮೀ. ಸ್ಟೀಪಲ್‌ಚೇಸರ್ ಅವಿನಾಶ್ ಸಬ್ಲೆಗೆ ಕೋಚಿಂಗ್ ನೀಡಿದ್ದರು. ಸಬ್ಲೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು.

2019ರಲ್ಲಿ ಭಾರತದ ಅಥ್ಲೆಟಿಕ್ಸ್ ಕೋಚ್ ಹುದ್ದೆಯನ್ನು ತ್ಯಜಿಸಿದ್ದ ಸ್ನೆಸರೆವ್ ಸುಮಾರು ಎರಡು ವರ್ಷಗಳ ಅಂತರದ ಬಳಿಕ ಭಾರತಕ್ಕೆ ಮತ್ತೆ ವಾಪಸಾಗಿದ್ದರು. ಒಲಿಂಪಿಕ್ಸ್ ಅಂತ್ಯದ ತನಕ ಅವರ ಗುತ್ತಿಗೆಯನ್ನು ವಿಸ್ತರಿಸಲಾಗಿತ್ತು. ಕೊರೋನದಿಂದಾಗಿ ಕಳೆದ ವರ್ಷ ಒಲಿಂಪಿಕ್ಸ್ ನಡೆದಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News