ನಾಲ್ಕನೇ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಇನಿಂಗ್ಸ್ ಜಯ, ಸರಣಿ ಕೈವಶ

Update: 2021-03-06 10:36 GMT

ಅಹಮದಾಬಾದ್: ಇಂಗ್ಲೆಂಡ್ ವಿರುದ್ಧ ಇಲ್ಲಿ ನಡೆದ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತವು ಇನಿಂಗ್ಸ್ ಹಾಗೂ 25 ರನ್ ಗಳಿಂದ ಜಯ ಸಾಧಿಸಿದೆ.  ಈ ಮೂಲಕ 4 ಪಂದ್ಯಗಳ ಸರಣಿಯನ್ನು 3-1 ಅಂತರದಿಂದ ವಶಪಡಿಸಿಕೊಂಡಿದೆ.

ಮೂರನೇ ದಿನವಾದ ಶನಿವಾರ 7 ವಿಕೆಟ್ ನಷ್ಟಕ್ಕೆ 294 ರನ್ ನಿಂದ ಬ್ಯಾಟಿಂಗ್ ಮುಂದುವರಿಸಿದ ಭಾರತವು ಮೊದಲ   ಇನಿಂಗ್ಸ್ ನಲ್ಲಿ 365 ರನ್ ಗೆ ಆಲೌಟಾಗಿದೆ. ಈ ಮೂಲಕ ಮೊದಲ ಇನಿಂಗ್ಸ್ ನಲ್ಲಿ 160 ರನ್ ಮುನ್ನಡೆ ಪಡೆಯುವಲ್ಲಿಯೂ ಯಶಸ್ವಿಯಾಗಿದೆ.

ಎರಡನೇ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾಯಿತು. 54.5 ಓವರ್ ಗಳಲ್ಲಿ ಕೇವಲ 135 ರನ್ ಗೆ ಆಲೌಟಾಗಿ ಇನಿಂಗ್ಸ್ ಅಂತರದ ಸೋಲು ಅನುಭವಿಸಿತು.

ಲೋಕಲ್ ಹೀರೊ ಅಕ್ಷರ್ ಪಟೇಲ್(5-48) ಹಾಗೂ ಹಿರಿಯ ಸ್ಪಿನ್ನರ್ ಆರ್.ಅಶ್ವಿನ್(5-47) 5 ವಿಕೆಟ್ ಗೊಂಚಲು ಕಬಳಿಸಿ ಇಂಗ್ಲೆಂಡ್ ಗೆ ಮತ್ತೊಮ್ಮೆ ಸಿಂಹಸ್ವಪ್ನರಾದರು. ಇಂಗ್ಲೆಂಡ್ ಪರ ಲಾರೆನ್ಸ್ ಅಗ್ರ ಸ್ಕೋರರ್(50) ಎನಿಸಿಕೊಂಡರು.

ಈ ಗೆಲುವಿನೊಂದಿಗೆ ಭಾರತವು ಲಾಡ್ರ್ಸ್‍ನಲ್ಲಿ ನಡೆಯುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆ ಅರ್ಹತೆ ಪಡೆದಿದೆ. ಫೈನಲ್‍ನಲ್ಲಿ ನ್ಯೂಝಿಲ್ಯಾಂಡ್ ಸವಾಲು ಎದುರಿಸಲಿದೆ. 

ಇಂಗ್ಲೆಂಡ್ ನ ಮೊದಲ ಇನಿಂಗ್ಸ್ ಗೆ ಉತ್ತರವಾಗಿ ಭಾರತವು ಒಂದು ಹಂತದಲ್ಲಿ 6 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿತ್ತು. ಆಗ ರಿಷಭ್ ಪಂತ್ ಶತಕ ಹಾಗೂ ವಾಶಿಂಗ್ಟನ್ ಸುಂದರ್ ಭರ್ಜರಿ ಅರ್ಧಶತಕ(96, 174ಎಸೆತ)ನೆರವಿನಿಂದ ಇಂಗ್ಲೆಂಡ್ ಗೆ ತಿರುಗೇಟು ನೀಡಿ 144 ಓವರ್‍ಗಳಲ್ಲಿ 365 ರನ್ ಗಳಿಸಲು ಶಕ್ತವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News