ಚೊಚ್ಚಲ ಟೆಸ್ಟ್ ಸರಣಿಯಲ್ಲಿ ಗರಿಷ್ಠ ವಿಕೆಟ್: ದಿಲೀಪ್ ದೋಶಿ ದಾಖಲೆ ಸರಿಗಟ್ಟಿದ ಅಕ್ಷರ್ ಪಟೇಲ್

Update: 2021-03-06 14:11 GMT

ಅಹಮದಾಬಾದ್, ಮಾ.6: ಭಾರತದ ಆಲ್‌ರೌಂಡರ್ ಅಕ್ಷರ್ ಪಟೇಲ್ ಮತ್ತೊಂದು ಐದು ವಿಕೆಟ್ ಗೊಂಚಲು ಪಡೆಯುವ ಮೂಲಕ  ತಾನಾಡಿದ್ದ ಮೊತ್ತ ಮೊದಲ ಟೆಸ್ಟ್ ಸರಣಿಯಲ್ಲಿ ಜಂಟಿ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಶನಿವಾರ ಕೊನೆಗೊಂಡಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಸರಣಿಯಲ್ಲಿ ಅಕ್ಷರ್ ಪಟೇಲ್ ಈ ದಾಖಲೆ ನಿರ್ಮಿಸಿದರು.

ಅಕ್ಷರ್ ಮೊದಲ ಟೆಸ್ಟ್‌ನಲ್ಲಿ ಆಡುವುದರಿಂದ ವಂಚಿತರಾಗಿದ್ದರು. ಆದರೆ, ಎರಡನೇ ಟೆಸ್ಟ್ ನ ಎರಡನೇ ಇನಿಂಗ್ಸ್‌ನಲ್ಲಿ ಐದು ವಿಕೆಟ್ ಗೊಂಚಲು ಪಡೆದಿದ್ದರು. ಎಡಗೈ ಸ್ಪಿನ್ನರ್ ಅಕ್ಷರ್ ಮೂರನೇ ಟೆಸ್ಟ್‌ನಲ್ಲಿ ಎರಡು ಬಾರಿ 5 ವಿಕೆಟ್ ಗೊಂಚಲು ಪಡೆದಿದ್ದರು.

 ನಾಲ್ಕನೇ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ 5 ವಿಕೆಟ್ ಗೊಂಚಲು ಪಡೆದ ಅಕ್ಷರ್ ಭಾರತದ ಪರ ಚೊಚ್ಚಲ ಟೆಸ್ಟ್ ಸರಣಿಯಲ್ಲಿ ಗರಿಷ್ಠ ವಿಕೆಟ್‌ಗಳನ್ನು ಪಡೆದಿದ್ದ ದಿಲಿಪ್ ದೋಶಿ(27 ವಿಕೆಟ್) ದಾಖಲೆಯನ್ನು ಸರಿಗಟ್ಟಿದರು. ದೋಶಿ 6 ಪಂದ್ಯಗಳಲ್ಲಿ 27 ವಿಕೆಟ್‌ಗಳನ್ನು ಕಬಳಿಸಿದ್ದರು. ಅಕ್ಷರ್ ಕೇವಲ 3 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಅಕ್ಷರ್ ಅವರು ಹಿರಿಯ ಸ್ಪಿನ್ನರ್ ಆರ್.ಅಶ್ವಿನ್ ಜೊತೆಗೂಡಿ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳನ್ನು ಸಿಂಹಸ್ವಪ್ನದಂತೆ ಕಾಡಿದರು. 4ನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಭಾರತವು ಇನಿಂಗ್ಸ್ ಹಾಗೂ 25 ರನ್‌ಗಳಿಂದ ಜಯ ಸಾಧಿಸಲು ನೆರವಾದರು.

ಶನಿವಾರ ಇಂಗ್ಲೆಂಡ್ ಇನಿಂಗ್ಸ್‌ನಲ್ಲಿ ಅಶ್ವಿನ್ 30ನೇ ಬಾರಿ ಐದು ವಿಕೆಟ್ ಗೊಂಚಲು ಪಡೆದಿದ್ದಾರೆ. ನಾಲ್ಕನೇ ಬಾರಿ 5 ವಿಕೆಟ್ ಗೊಂಚಲು ಪಡೆದ ಅಕ್ಷರ್ ಭಾರತವು 4ನೇ ಟೆಸ್ಟ್ ಪಂದ್ಯವನ್ನು ಮೂರನೆ ದಿನದಾಟದಲ್ಲಿ ಜಯ ಸಾಧಿಸಿ ಸರಣಿಯನ್ನು 3-1 ಅಂತರದಿಂದ ಗೆದ್ದುಕೊಂಡು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ತೇರ್ಗಡೆಯಾಗಲು ಕಾರಣರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News