ಸರಣಿಗೆ ಅಂತಿಮ 11ರ ಆಯ್ಕೆಗೆ ಸವಾಲು

Update: 2021-03-09 04:45 GMT

 ಅಹಮದಾಬಾದ್: ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯಗಳಿಗೆ ಭಾರತ ತಂಡದ ಆಯ್ಕೆಗೆ 19 ಮಂದಿ ಲಭ್ಯರಿದ್ದಾರೆ. ಈ ಕಾರಣದಿಂದಾಗಿ ತಂಡದ ಅಂತಿಮ ಹನ್ನೊಂದರ ಆಯ್ಕೆಯು ತಂಡದ ಆಯ್ಕೆ ಸಮಿತಿಗೆ ತಲೆನೋವಾಗಿ ಪರಿಣಮಿಸಲಿದೆ.

 ಶಿಖರ್‌ಧವನ್, ಲೋಕೇಶ್ ರಾಹುಲ್, ದೀಪಕ್ ಚಹರ್, ಭುವನೇಶ್ವರ್ ಕುಮಾರ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್ ಇವರು ತಂಡದಲ್ಲಿ ಆಡುವ ಅವಕಾಶ ಪಡೆಯಲು ಪೈಪೋಟಿ ನಡೆಸುತ್ತಿದ್ದಾರೆ.

ಟ್ವೆಂಟಿ-20 ಸರಣಿ ಶುಕ್ರವಾರದಿಂದ ಆರಂಭವಾಗಲಿದೆ. ಐದು ಪಂದ್ಯಗಳ ಇಲೆವೆನ್‌ಗೆ ಮುಖ್ಯ ಕೋಚ್ ರವಿಶಾಸ್ತ್ರಿ, ನಾಯಕ ವಿರಾಟ್ ಕೊಹ್ಲಿ ಮತ್ತು ಬೌಲಿಂಗ್ ಕೋಚ್ ಭರತ್ ಅರುಣ್ ತಂಡದ ಅಂತಿಮ ಹನ್ನೊಂದರ ಆಯ್ಕೆ ನಡೆಸುತ್ತಿದ್ದಾರೆ. ಟ್ವೆಂಟಿ-20 ವಿಶ್ವಕಪ್‌ಗೆ 7 ತಿಂಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಅತ್ಯುತ್ತಮ ತಂಡವನ್ನು ಕಟ್ಟಲು ತಂಡದ ಮ್ಯಾನೇಜ್‌ಮೆಂಟ್ ನೋಡುತ್ತಿದೆ.

 ಪಂತ್ ಅವರ ಸೇರ್ಪಡೆಯು ರಾಹುಲ್‌ಗೆ ವಿಕೆಟ್ ಕೀಪರ್ ಸ್ಥಾನ ಕೈ ತಪ್ಪುವಂತಾಗಿದೆ. ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಇತ್ತೀಚಿನವರೆಗೂ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಓಪನಿಂಗ್ ಜೋಡಿಯಾಗಿದ್ದರು. ರಾಹುಲ್ ಈಗ ಸ್ಪರ್ಧೆಯಲ್ಲಿದ್ದಾರೆ. ನಾಯಕ ಕೊಹ್ಲಿ ನಂ.3, ಗೇಮ್ ಚೇಂಜರ್‌ಗಳಾದ ಪಂತ್ ಮತ್ತು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ 5 ಮತ್ತು 6 ನೇ ಸ್ಥಾನದಲ್ಲಿ ಆಡುವ ನಿರೀಕ್ಷೆಯಿದೆ. ರಾಹುಲ್‌ಗೆ ನಂ.4 ಕ್ರಮಾಂಕದ ನಿರೀಕ್ಷೆಯಲ್ಲಿದ್ದರೂ, ಶ್ರೇಯಸ್ ಅಯ್ಯರ್ ಮತ್ತು ಸೂರ್ಯಕುಮಾರ್ ಯಾದವ್ ಈ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ವೇಗದ ಬೌಲಿಂಗ್ ವಿಭಾಗದಲ್ಲಿ, ಭುವನೇಶ್ವರ್ ಕುಮಾರ್ ಅವರಿಗೆ ದೀಪಕ್ ಚಹರ್ ಮತ್ತು ಶಾರ್ದುಲ್ ಠಾಕೂರ್ ಸವಾಲು ಎದುರಾಗಿದೆ. ಯಜುವೇಂದ್ರ ಚಹಾಲ್, ವಾಶಿಂಗ್ಟನ್ ಸುಂದರ್ ಮತ್ತು ಅಕ್ಷರ್ ಪಟೇಲ್ ನಿಧಾನಗತಿಯ ಮೊಟೆರಾ ಟ್ರಾಕ್‌ನಲ್ಲಿ ಆಡುವ ಇಲೆವೆನ್‌ನಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. ಟಿ.ನಟರಾಜನ್, ನವದೀಪ್ ಸೈನಿ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News