×
Ad

ಭಾರತ-ನ್ಯೂ ಝಿಲ್ಯಾಂಡ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಸೌತಾಂಪ್ಟನ್ ಆತಿಥ್ಯ

Update: 2021-03-11 00:34 IST

ದುಬೈ: ಮೊದಲ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ ಹಾಗೂ ನ್ಯೂಝಿಲ್ಯಾಂಡ್ ತಂಡಗಳು ಮುಖಾಮುಖಿಯಾಗಲಿವೆ. ಜೂನ್ 18ರಿಂದ 22ರ ತನಕ ನಡೆಯಲಿರುವ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವನ್ನು ಸೌತಾಂಪ್ಟನ್‌ನ ಹ್ಯಾಂಪ್ ಶೈರ್ ಬೌಲ್ ಕ್ರೀಡಾಂಗಣ ಆತಿಥ್ಯ ವಹಿಸಲಿದೆ ಇದು ಬಯೊ ಬಬಲ್ ನಿಯಮದಡಿ ಆಯೋಜನೆಯಾಗಲಿದೆ ಎಂದು ಜಾಗತಿಕ ಕ್ರಿಕೆಟ್ ಮಂಡಳಿ ಐಸಿಸಿ ಬುಧವಾರ ತಿಳಿಸಿದೆ.

ಈ ಹಿಂದೆ ಐತಿಹಾಸಿಕ ಲಾರ್ಡ್ಸ್‌ಕ್ರೀಡಾಂಗಣದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆಯೋಜಿಸಲು ನಿರ್ಧರಿಸಲಾಗಿತ್ತು. ಕೋವಿಡ್-19ರ ಸಂಭಾವ್ಯ ಪರಿಣಾಮವನ್ನು ಕಡಿಮೆ ಮಾಡಲು ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಐಸಿಸಿ ಬೋರ್ಡ್ ಹಾಗೂ ಇಂಗ್ಲೆಂಡ್-ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ)ಪಂದ್ಯದ ತಾಣವನ್ನು ಬದಲಿಸಲು ನಿರ್ಧರಿಸಿದವು. ಹ್ಯಾಂಪ್ ಶೈರ್ ಬೌಲ್ ಕ್ರೀಡಾಂಗಣವನ್ನು ಆಯ್ಕೆ ಮಾಡುವಾಗ 2020ರಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಜೈವಿಕ ಸುರಕ್ಷತೆಗೆ ಸಂಬಂಧಿಸಿ ಇಸಿಬಿಯ ಅನುಭವವನ್ನು ಬಳಸಿಕೊಳ್ಳಲು ಐಸಿಸಿ ನಿರ್ಧರಿಸಿತು. ಹ್ಯಾಂಪ್ ಶೈರ್ ಬೌಲ್ ತಾಣವು ವಿಶ್ವ ದರ್ಜೆಯ ಆಟ, ತರಬೇತಿ ಸೌಲಭ್ಯ ಗಳನ್ನು ಒದಗಿಸುತ್ತದೆ. ಎರಡೂ ತಂಡಗಳಿಗೆ ತಯಾರಿ ನಡೆಸಲು ಉತ್ತಮ ವಾತಾವರಣವನ್ನು ನೀಡುತ್ತದೆ ಎಂದು ಐಸಿಸಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

ನ್ಯೂಝಿಲ್ಯಾಂಡ್ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದ ಮೊದಲ ತಂಡವಾಗಿದೆ. ಶನಿವಾರ ಅಹಮದಾಬಾದ್‌ನಲ್ಲಿ ಕೊನೆಗೊಂಡ ಇಂಗ್ಲೆಂಡ್ ವಿರುದ್ಧ ಸರಣಿಯನ್ನು 3-1 ಅಂತರದಿಂದ ಗೆದ್ದ ಬಳಿಕ ಭಾರತವು ಫೈನಲ್‌ಗೆ ಅರ್ಹತೆ ಪಡೆದಿತ್ತು. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಟೆಸ್ಟ್ ಕ್ಯಾಲೆಂಡರ್ ನಲ್ಲಿ ಒಂದು ಪ್ರಮುಖ ಸ್ಪರ್ಧೆಯಾಗಿದೆ. ಇದು ಕ್ರಿಕೆಟ್‌ನ ಅತ್ಯಂತ ಹಳೆಯ ಪ್ರಕಾರದ 1 ವಾರದ ಆಚರಣೆಯಾಗಿದೆ ಎಂದು ಐಸಿಸಿ ಕ್ರಿಕೆಟ್ ಜನರಲ್ ಮ್ಯಾನೇಜರ್ ಜೆಫ್ ಅಲಾರ್ಡಿಸ್ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News