×
Ad

ಟ್ವೆಂಟಿ -20 ಟೀಮ್ ರ‍್ಯಾಂಕಿಂಗ್: ದ್ವಿತೀಯ ಸ್ಥಾನಕ್ಕೇರಿದ ಭಾರತ

Update: 2021-03-11 00:39 IST

ದುಬೈ, ಮಾ.10: ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಬುಧವಾರ ಐಸಿಸಿ ಟ್ವೆಂಟಿ-20 ರ್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನಕ್ಕೇರಿದೆ. ಭಾರತ ಈಗಾಗಲೇ ನಂ.1 ಟೆಸ್ಟ್ ತಂಡವಾಗಿ ಹೊರಹೊಮ್ಮಿದ್ದು, 50 ಓವರ್ ಮಾದರಿ(ಏಕದಿನ)ಕ್ರಿಕೆಟ್‌ನಲ್ಲಿ ಎರಡನೇ ಸ್ಥಾನದಲ್ಲಿದೆ.

ಆಸ್ಟ್ರೇಲಿಯವು ನ್ಯೂಝಿಲ್ಯಾಂಡ್ ವಿರುದ್ಧದ 5 ಪಂದ್ಯಗಳ ಟ್ವೆಂಟಿ-20 ಸರಣಿಯನ್ನು 3-2 ಅಂತರದಿಂದ ಸೋತಿದ್ದು, ಹೀಗಾಗಿ ಆ್ಯರೊನ್ ಫಿಂಚ್ ನೇತೃತ್ವದ ಆಸ್ಟ್ರೇಲಿಯ ಮೂರನೇ ಸ್ಥಾನಕ್ಕೆ ಕುಸಿದಿದೆ. ಭಾರತಕ್ಕಿಂತ ಕೇವಲ ಒಂದು ಅಂಕ ಹಿಂದಿದೆ.

ಇಂಗ್ಲೆಂಡ್ ಅಗ್ರಸ್ಥಾನದಲ್ಲಿದ್ದು, ಸದ್ಯ ಭಾರತಕ್ಕಿಂತ ಏಳು ಅಂಕದಿಂದ ಮುನ್ನಡೆಯಲ್ಲಿದೆ.

ಟೀಮ್ ಇಂಡಿಯಾವು ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟ್ವೆಂಟಿ-20 ಸರಣಿಯನ್ನಾಡಲು ಸಜ್ಜಾ ಗಿದ್ದು, ಆತಿಥೇಯ ಭಾರತಕ್ಕೆ ಟೀಮ್ ರ್ಯಾಂಕಿಂಗ್‌ನಲ್ಲಿ ಇನ್ನಷ್ಟು ಪ್ರಗತಿ ಸಾಧಿಸುವ ಅವಕಾಶವಿದೆ.

 ಟಿ-20 ಬ್ಯಾಟ್ಸ್‌ಮನ್‌ಗಳ ರ್ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯ ನಾಯಕ ಆ್ಯರೊನ್ ಫಿಂಚ್ ದ್ವಿತೀಯ ಸ್ಥಾನಕ್ಕೇರಿದ್ದಾರೆ. ಫಿಂಚ್ ನ್ಯೂಝಿಲ್ಯಾಂಡ್ ವಿರುದ್ಧ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಫಿಂಚ್ ಎರಡು ಸ್ಥಾನ ಭಡ್ತಿ ಪಡೆದು ದ್ವಿತೀಯ ಸ್ಥಾನಕ್ಕೇರಿದರು. ಕೆ.ಎಲ್.ರಾಹುಲ್ ಒಂದು ಸ್ಥಾನ ಕೆಳಜಾರಿದ್ದು, ಇದೀಗ ಅವರು 3ನೇ ಸ್ಥಾನದಲ್ಲಿದ್ದಾರೆ.

ಚುಟುಕು ಮಾದರಿ ಕ್ರಿಕೆಟಿನ ಬ್ಯಾಟಿಂಗ್ ರ್ಯಾಂಕಿಂಗ್‌ನಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಆರನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಇಂಗ್ಲೆಂಡ್ ನಾಯಕ ಇಯಾನ್ ಮೊರ್ಗನ್ ಕೂಡ ರ್ಯಾಂಕಿಂಗ್‌ನಲ್ಲಿ 10ನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ನ್ಯೂಝಿಲ್ಯಾಂಡ್‌ನ ಆರಂಭಿಕ ಬ್ಯಾಟ್ಸ್ ಮನ್ ಮಾರ್ಟಿನ್ ಗಪ್ಟಿಲ್ ಮೂರು ಸ್ಥಾನ ಮೇಲಕ್ಕೇರಿದ್ದು, ಹೀಗಾಗಿ ಅವರು ಅಗ್ರ-10ರಲ್ಲಿ ಸ್ಥಾನ ಪಡೆದಿದ್ದಾರೆ.

ಟಿ-20 ಬೌಲಿಂಗ್ ಹಾಗೂ ಆಲ್‌ರೌಂಡರ್ ರ್ಯಾಂಕಿಂಗ್‌ಗಳಲ್ಲಿ ಯಾವುದೇ ಭಾರತೀಯ ಆಟಗಾರನಿಲ್ಲ. ರಶೀದ್ ಖಾನ್ ಟಿ-20 ಮಾದರಿ ಕ್ರಿಕೆಟ್‌ನಲ್ಲಿ ನಂ.1 ರ್ಯಾಂಕಿನ ಬೌಲರ್ ಆಗಿದ್ದು, ಅಫ್ಘಾನಿಸ್ತಾನದ ಮುಹಮ್ಮದ್ ನಬಿ ನಂ.1 ರ್ಯಾಂಕಿನ ಆಲ್‌ರೌಂಡರ್ ಆಗಿದ್ದಾರೆ.

ಬೌಲಿಂಗ್ ರ್ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯದ ಸ್ಪಿನ್ನರ್ ಆ್ಯಶ್ಟನ್ ಅಗರ್ 4 ಸ್ಥಾನ ಭಡ್ತಿ ಪಡೆದು ನಾಲ್ಕನೇ ಸ್ಥಾನದಲ್ಲಿದ್ದಾರೆ.ಕಿವೀಸ್ ಸ್ಪಿನ್ನರ್ ಐಶ್ ಸೋಧಿ 3 ಸ್ಥಾನ ಮೇಲಕ್ಕೇರಿ ಇದೀಗ 8ನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ಸ್ಪಿನ್ನರ್ ಲಕ್ಷಣ್ ಸಂಡಕನ್ 9 ಸ್ಥಾನ ಭಡ್ತಿ ಪಡೆದು 10ನೇ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News