ಟ್ವೆಂಟಿ-20 ಕ್ರಿಕೆಟ್: ಗರಿಷ್ಠ ವಿಕೆಟ್ ಪಡೆದ ಭಾರತದ ಬೌಲರ್ ಆಗಿ ಹೊರಹೊಮ್ಮಿದ ಚಹಾಲ್
ಅಹಮದಾಬಾದ್: ಸ್ಪಿನ್ನರ್ ಯಜುವೇಂದ್ರ ಚಹಾಲ್ ತಮ್ಮ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿದ್ದಾರೆ. ಅವರೀಗ ಟ್ವೆಂಟಿ-20 ಕ್ರಿಕೆಟ್ ನಲ್ಲಿ ಗರಿಷ್ಠ ವಿಕೆಟ್ ಗಳನ್ನು ಕಬಳಿಸಿದ ಭಾರತದ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಇಂಗ್ಲೆಂಡ್ ವಿರುದ್ಧ ಶುಕ್ರವಾರ ನಡೆದ ಮೊದಲ ಟ್ವೆಂಟಿ-20 ಅಂತರ್ ರಾಷ್ಟ್ರೀಯ ಪಂದ್ಯದಲ್ಲಿ ಈ ಸಾಧನೆ ಮಾಡಿದರು.
ಈ ಸಾಧನೆಯ ಮುಖಾಂತರ ಚಹಾಲ್ ಭಾರತದ ವೇಗದ ಬೌಲರ್ ಜಸ್ ಪ್ರೀತ್ ಬುಮ್ರಾ ಅವರ ದಾಖಲೆಯನ್ನು ಹಿಂದಿಕ್ಕಿದರು.
30ರ ವಯಸ್ಸಿನ ಚಹಾಲ್ ಇಂಗ್ಲೆಂಡ್ ಇನಿಂಗ್ಸ್ ನ 8ನೇ ಓವರ್ ನಲ್ಲಿ ಜೋಸ್ ಬಟ್ಲರ್ (28) ವಿಕೆಟ್ ಪಡೆದರು. ಇದು ಚಹಾಲ್ ಟಿ-20ಯಲ್ಲಿ ಗಳಿಸಿದ 60ನೇ ವಿಕೆಟ್ ಆಗಿತ್ತು. ಈ ಪಂದ್ಯ ಆರಂಭವಾಗುವ ಮೊದಲು 59 ವಿಕೆಟ್ ಪಡೆದಿದ್ದ ಚಹಾಲ್ ಎಲೈಟ್ ಲಿಸ್ಟ್ ನಲ್ಲಿ ಬುಮ್ರಾರೊಂದಿಗೆ ಅಗ್ರಸ್ಥಾನವನ್ನು ಹಂಚಿಕೊಂಡಿದ್ದರು.
ಭಾರತದ ಪರ ಶುಕ್ರವಾರ 100ನೇ ಅಂತರ್ ರಾಷ್ಟ್ರೀಯ ಪಂದ್ಯವನ್ನು ಆಡಿದ ಚಹಾಲ್ ಇದೀಗ 46 ಟಿ-20 ಪಂದ್ಯಗಳಲ್ಲಿ ಒಟ್ಟು 60 ವಿಕೆಟ್ ಗಳನ್ನು ಪಡೆದಿದ್ದಾರೆ. ಬುಮ್ರಾ 50 ಟಿ-20 ಪಂದ್ಯಗಳ ಪೈಕಿ 59 ವಿಕೆಟ್ ಗಳನ್ನು ಉರುಳಿಸಿದ್ದಾರೆ.