“ಮುಸ್ಲಿಮ್ ಸಮುದಾಯವನ್ನು ಬೆಂಬಲಿಸುವುದು ದೇಶದ ಕರ್ತವ್ಯ”

Update: 2021-03-13 16:13 GMT
ನ್ಯೂಝಿಲ್ಯಾಂಡ್ ಪ್ರಧಾನಿ ಜಸಿಂಡಾ ಆರ್ಡರ್ನ್

ವೆಲಿಂಗ್ಟನ್ (ನ್ಯೂಝಿಲ್ಯಾಂಡ್), ಮಾ. 13: ನ್ಯೂಝಿಲ್ಯಾಂಡ್‌ನ ಕ್ರೈಸ್ಟ್‌ಚರ್ಚ್ ನಗರದ ಮಸೀದಿಗಳ ಮೇಲೆ ಭಯೋತ್ಪಾದಕನೊಬ್ಬ ನಡೆಸಿದ ಭೀಕರ ಗುಂಡಿನ ದಾಳಿಗೆ ಎರಡು ವರ್ಷಗಳು ತುಂಬುತ್ತಿವೆ. ಈ ಸಂದರ್ಭದಲ್ಲಿ ನಡೆದ ಭಾವನಾತ್ಮಕ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ದೇಶದ ಪ್ರಧಾನಿ ಜಸಿಂಡಾ ಆರ್ಡರ್ನ್, ಮುಸ್ಲಿಮ್ ಸಮುದಾಯವನ್ನು ಬೆಂಬಲಿಸುವುದು ದೇಶದ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ. ಬಿಗಿ ಭದ್ರತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಾಗಿಯಾದರು.

2019 ಮಾರ್ಚ್ 15ರಂದು ಬಂದೂಕುಧಾರಿ ನಡೆಸಿದ ದಾಳಿಯಲ್ಲಿ 51 ಮಂದಿ ಮೃತಪಟ್ಟಿದ್ದರು ಹಾಗೂ ಹಲವಾರು ಮಂದಿ ಗಾಯಗೊಂಡಿದ್ದರು.

ದಾಳಿಯ ನಂತರದ ಪರಿಸ್ಥಿತಿಯನ್ನು ಜಸಿಂಡಾ ಆರ್ಡರ್ನ್ ನಿಭಾಯಿಸಿದ ರೀತಿ ಹಾಗೂ ಸಂತ್ರಸ್ತರ ಪರವಾಗಿ ಅವರು ತೋರಿಸಿದ ಅನುಕಂಪಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗಿತ್ತು. ಘಟನೆಗೆ ತಕ್ಷಣ ಪ್ರತಿಕ್ರಿಯಿಸಿದ ಅವರು, ದೇಶದ ಬಂದೂಕು ನಿಯಂತ್ರಣ ನೀತಿಯನ್ನು ಕಠಿಣಗೊಳಿಸಿದರು.

‘‘ಮಾತುಗಳಿಗೆ ಸಾಂತ್ವನದ ಶಕ್ತಿಯಿದೆಯಾದರೂ, ಏನು ನಡೆದಿದೆಯೋ ಅದನ್ನು ಬದಲಿಸಲು ಮಾತುಗಳಿಗೆ ಸಾಧ್ಯವಿಲ್ಲ’’ ಎಂದು ಜಸಿಂಡಾ ಹೇಳಿದರು.

‘‘ಭಯೋತ್ಪಾದಕ ಕೃತ್ಯಕ್ಕೆ ಪುರುಷರು, ಮಹಿಳೆಯರು ಮತ್ತು ಮಕ್ಕಳು ಬಲಿಯಾದರು. ಅಂದು ಮುಸ್ಲಿಮ್ ಸಮುದಾಯವನ್ನು ಆವರಿಸಿದ ಭೀತಿಯನ್ನು ಮಾತುಗಳು ತೊಡೆದುಹಾಕಲಾರವು’’ ಎಂದು ಅವರು ನುಡಿದರು.

‘‘ನಮ್ಮ ದೇಶವು ಎಲ್ಲರನ್ನು ಒಳಗೊಳ್ಳುವ ದೇಶವಾಗಬೇಕು. ವೈವಿಧ್ಯತೆಯ ಬಗ್ಗೆ ಹೆಮ್ಮೆ ಪಡುವವರು ನಾವಾಗಬೇಕು. ಅಗತ್ಯ ಬಿದ್ದರೆ, ಇವುಗಳ ರಕ್ಷಣೆಗಾಗಿ ಯಾವುದೇ ಹೋರಾಟಕ್ಕೂ ಸಿದ್ಧವಾಗಬೇಕು’’ ಎಂದು ನ್ಯೂಝಿಲ್ಯಾಂಡ್ ಪ್ರಧಾನಿ ಹೇಳಿದರು.

 ‘ಇದರ ಮುಂದೆ ನನ್ನ ನೋವು ಏನೂ ಅಲ್ಲ’

 ಎರಡು ವರ್ಷಗಳ ಹಿಂದಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ತೆಮೆಲ್ ಅತಾಕೊಕ್ಯೂಗು ಅಂದಿನ ಘಟನೆಯನ್ನು ನೆನೆಯುತ್ತಾ ಕಣ್ಣೀರು ಹಾಕಿದರು. ಅವರ ಮುಖ, ಕೈಗಳು ಮತ್ತು ಕಾಲುಗಳಿಗೆ ಒಂಬತ್ತು ಬಾರಿ ಗುಂಡು ಹಾರಿಸಲಾಗಿತ್ತು.

ಮೂರು ವರ್ಷದ ಮಗುವೊಂದರ ತಂದೆಯೊಂದಿಗೆ ಚಿಕಿತ್ಸೆಗಾಗಿ ಕಾಯುತ್ತಿದ್ದಾಗ, ಆ ಮಗು ಮೃತಪಟ್ಟಿದೆ ಎಂಬ ವಿಷಯ ನಮಗೆ ಗೊತ್ತಾಯಿತು ಎಂದು ಅವರು ಹೇಳಿದರು.

‘‘ಆಗ ನನಗೆ ಒಮ್ಮೆಲೆ ಅನಿಸಿತು- ಇದರ ಮುಂದೆ ನನ್ನ ನೋವು ಏನೂ ಅಲ್ಲ’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News