ಅಟ್ಲಾಂಟ ಸ್ಪಾಗಳ ಮೇಲೆ ದಾಳಿ: ಬಂಧಿತನ ವಿರುದ್ಧ 8 ಕೊಲೆ ಮೊಕದ್ದಮೆ

Update: 2021-03-18 15:56 GMT

ಅಟ್ಲಾಂಟ (ಅಮೆರಿಕ), ಮಾ. 18: ಅಮೆರಿಕದ ಜಾರ್ಜಿಯ ರಾಜ್ಯದ ರಾಜಧಾನಿ ಅಟ್ಲಾಂಟದ ಸುತ್ತಲಿನ ಮೂರು ಸ್ಪಾ (ಬ್ಯೂಟಿಪಾರ್ಲರ್ ಮತ್ತು ಮಸಾಜ್ ಕೇಂದ್ರ)ಗಳ ಮೇಲೆ ದಾಳಿ ನಡೆಸಿ ಎಂಟು ಮಂದಿಯನ್ನು ಕೊಂದ ಆರೋಪದಲ್ಲಿ ಬಂಧಿತನಾಗಿರುವ 21 ವರ್ಷದ ಬಂದೂಕುಧಾರಿ ರಾಬರ್ಟ್ ಆ್ಯರನ್ ಲಾಂಗ್ ವಿರುದ್ಧ ಕೊಲೆ ಮೊಕದ್ದಮೆ ದಾಖಲಾಗಿದೆ.

ಹಂತಕನ ದಾಳಿಯಲ್ಲಿ ಮಡಿದ ಎಂಟು ಮಂದಿಯ ಪೈಕಿ ಆರು ಮಂದಿ ಏಶ್ಯ ಮೂಲದವರು. ಈ ದಾಳಿಯನ್ನು ತಾನು ಜನಾಂಗೀಯ ದ್ವೇಷದಿಂದ ಮಾಡಿಲ್ಲ ಎಂಬುದಾಗಿ ಆರೋಪಿ ಹೇಳಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಅವನ ಕೃತ್ಯಕ್ಕೆ ಕಾರಣವೇನು ಎನ್ನುವುದನ್ನು ಪೊಲೀಸರು ಹೇಳಿಲ್ಲ.

ರಿಹಾನಾ ಖಂಡನೆ

ಅಟ್ಲಾಂಟದ ಸ್ಪಾಗಳ ಮೇಲೆ ನಡೆದ ಗುಂಡಿನ ದಾಳಿಯಲ್ಲಿ 8 ಮಂದಿ ಹತರಾಗಿರುವ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಅಂತರ್‌ರಾಷ್ಟ್ರೀಯ ಪಾಪ್ ತಾರೆ ರಿಹಾನಾ, ಏಶ್ಯನ್-ಅಮೆರಿಕನ್ ಸಮುದಾಯಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಮೂರು ಸ್ಪಾಗಳ ಮೇಲೆ ನಡೆದ ದಾಳಿಯಲ್ಲಿ ಮೃತಪಟ್ಟಿರುವ 8 ಮಂದಿಯ ಪೈಕಿ 6 ಮಂದಿ ಏಶ್ಯ ಮೂಲದವರಾಗಿದ್ದಾರೆ.

‘‘ಅಟ್ಲಾಂಟ ನಗರದಲ್ಲಿ ನಡೆದಿರುವ ಹತ್ಯಾಕಾಂಡವು ಯಾವುದೇ ದೃಷ್ಟಿಕೋನದಿಂದ ನೋಡಿದರೂ ಪ್ರತ್ಯೇಕ ಘಟನೆಯಲ್ಲ. ಏಶ್ಯನ್ ಅಮೆರಿಕನ್ನರು ಮತ್ತು ಪೆಸಿಫಿಕ್ ದ್ವೀಪವಾಸಿಗಳ ಮೇಲಿನ ದ್ವೇಷವು ಅವ್ಯಾಹತವಾಗಿದೆ. ಇದು ನಿಲ್ಲಬೇಕು’’ ಎಂಬುದಾಗಿ ಅವರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News