ಅಶ್ಲೀಲ ಸಿಡಿ ಬಿಡುಗಡೆ ಪ್ರಕರಣ: 2ನೆ ಬಾರಿಗೆ ರಮೇಶ್ ಜಾರಕಿಹೊಳಿ ವಿಚಾರಣೆ
ಬೆಂಗಳೂರು, ಮಾ.19: ಅಶ್ಲೀಲ ಸಿಡಿ ಬಿಡುಗಡೆ ಪ್ರಕರಣ ಸಂಬಂಧ ದೂರುದಾರ, ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರನ್ನು ಸಿಟ್ ತನಿಖಾಧಿಕಾರಿಗಳು ಎರಡನೆ ಬಾರಿಗೆ ವಿಚಾರಣೆ ನಡೆಸಿ, ಕೆಲ ಮಾಹಿತಿಗಳನ್ನು ಸಂಗ್ರಹಿಸಿದರು.
ಶುಕ್ರವಾರ ಇಲ್ಲಿನ ಆಡುಗೊಡಿ ತಾಂತ್ರಿಕ ವಿಭಾಗದ ತಂಡವೂ ರಮೇಶ್ ಜಾರಕಿಹೊಳಿ ಅವರನ್ನು ವಿಚಾರಣೆಗೊಳಪಡಿಸಿದ್ದು, ಹಲವು ಪ್ರಶ್ನೆಗಳಿಗೆ ಅವರು ಲಿಖಿತ ಉತ್ತರ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಚಾರಣೆಗೆ ಹಾಜರಾಗುವಂತೆ ಸಿಟ್ ತನಿಖಾಧಿಕಾರಿಗಳು ಜಾರಿಗೊಳಿಸಿದ್ದ ನೋಟಿಸ್ ಹಿನ್ನೆಲೆ ರಮೇಶ್ ಜಾರಕಿಹೊಳಿ ಹಾಜರಾಗಿದ್ದು, ಸತತ ನಾಲ್ಕು ಗಂಟೆಗಳ ಕಾಲ ವಿಚಾರಣೆ ಎದುರಿಸಿದರು. ಈ ಸಂದರ್ಭದಲ್ಲಿ ಸಿಟ್ ಮುಖ್ಯ ಅಧಿಕಾರಿ ಸೌಮೇಂದು ಮುಖರ್ಜಿ ಸೇರಿದಂತೆ ಹಲವು ತನಿಖಾಧಿಕಾರಿಗಳು ಉಪಸ್ಥಿತರಿದ್ದರು.
ಇನ್ನು ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಸುದ್ದಿವಾಹಿನಿ ಮಾಜಿ ಪತ್ರಕರ್ತನ ಬ್ಯಾಂಕ್ ಖಾತೆಯನ್ನು ಪರಿಶೀಲನೆ ನಡೆಸಿದ್ದು, ಒಂದು ಬ್ಯಾಂಕ್ ಖಾತೆಯಲ್ಲಿ 20 ಸಾವಿರ ಹಾಗೂ ಮತ್ತೊಂದು ಬ್ಯಾಂಕ್ ಖಾತೆಯಲ್ಲಿ 2.28 ರೂಪಾಯಿ ಇರುವುದು ಗೊತ್ತಾಗಿದೆ. ಸ್ನೇಹಿತೆಯಿಂದ 30 ಸಾವಿರ ರೂಪಾಯಿ ಸಾಲ ಪಡೆದುಕೊಂಡಿದ್ದ ಆತ, ಬ್ಯಾಂಕ್‍ವೊಂದರಲ್ಲಿ ಸಾಲ ಪಡೆದು ತಿಂಗಳಿಗೆ 5 ಸಾವಿರ ಸಾಲ ಪಾವತಿ ಮಾಡುತ್ತಿದ್ದ ಎಂಬುವುದು ಮೇಲ್ನೋಟಕ್ಕೆ ತಿಳಿದುಬಂದಿದೆ.
ಎಸಿಬಿಗೆ ದೂರು: ಮತ್ತೊಂದೆಡೆ ಸಿಡಿ ಬಿಡುಗಡೆ ಹಿನ್ನೆಲೆಯಲ್ಲಿ 5 ಕೋಟಿ ರೂ. ಹಣ ನೀಡಿದ್ದೇನೆ ಎಂದು ಹೇಳಿಕೆ ನೀಡಿರುವ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಹಾಗೂ 5 ಕೋಟಿ ರೂ. ವ್ಯವಹಾರ ನಡೆದಿದೆ ಎಂದಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಸೂಕ್ತ ರೀತಿಯಲ್ಲಿ ತನಿಖೆ ನಡೆಸುವಂತೆ ಕೋರಿ ಎಸಿಬಿಗೆ ವಕೀಲ ಆರ್.ಮಂಜುನಾಥ್ ದೂರು ನೀಡಿದ್ದಾರೆ.