ಜಪಾನ್‌ ನ ಈಶಾನ್ಯ ಕರಾವಳಿಯಲ್ಲಿ ಪ್ರಬಲ ಭೂಕಂಪ

Update: 2021-03-20 16:51 GMT

ಟೋಕಿಯೊ (ಜಪಾನ್), ಮಾ. 20: ಈಶಾನ್ಯ ಜಪಾನ್‌ನಲ್ಲಿ ಶನಿವಾರ ಭೂಕಂಪ ಸಂಭವಿಸಿದ್ದು, 10 ವರ್ಷಗಳ ಹಿಂದಿನ ಭೂಕಂಪದಿಂದ ಜರ್ಜರಿತವಾಗಿರುವ ಪ್ರದೇಶಗಳು ಮತ್ತೆ ನಡುಗಿವೆ. ಭೂಕಂಪದ ಬೆನ್ನಿಗೇ ಒಂದು ಮೀಟರ್ ಎತ್ತರದ ಸುನಾಮಿ ಅಲೆಗಳು ಹುಟ್ಟಿಕೊಂಡವು ಹಾಗೂ ಕಟ್ಟಡಗಳು ಕಂಪಿಸಿದವು.

ರಿಕ್ಟರ್ ಮಾಪಕದಲ್ಲಿ 7.2ರಷ್ಟಿದ್ದ ತೀವ್ರತೆಯ ಪ್ರಬಲ ಭೂಕಂಪವು ಸ್ಥಳೀಯ ಸಮಯ ಸಂಜೆ 6:26ಕ್ಕೆ ಮಿಯಾಗಿ ರಾಜ್ಯದ ಕರಾವಳಿಯಲ್ಲಿ 60 ಕಿ.ಮೀ. ಆಳದಲ್ಲಿ ಸಂಭವಿಸಿತು ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ.

ಭೂಕಂಪದ ಬೆನ್ನಿಗೇ ಸುನಾಮಿ ಎಚ್ಚರಿಕೆಯನ್ನು ಹೊರಡಿಸಲಾಯಿತಾದರೂ, ಒಂದು ಗಂಟೆಯ ಬಳಿಕ ಎಚ್ಚರಿಕೆಯನ್ನು ಹಿಂದಕ್ಕೆ ಪಡೆದುಕೊಳ್ಳಲಾಯಿತು ಎಂದು ಸುದ್ದಿವಾಹಿನಿ ಎನ್‌ಎಚ್‌ಕೆ ವರದಿ ಮಾಡಿದೆ.

ದುರಂತದಿಂದಾಗಿ ಮೃತಪಟ್ಟವರು ಅಥವಾ ಗಾಯಗೊಂಡವರ ಬಗ್ಗೆ ತಕ್ಷಣಕ್ಕೆ ವರದಿಗಳು ಬಂದಿಲ್ಲ.

ತನ್ನ ಫುಕುಶಿಮ ದಾಯಿಚಿ ಪರಮಾಣು ಸ್ಥಾವರದಲ್ಲಿ ಯಾವುದೇ ಸಮಸ್ಯೆ ತಲೆದೋರಿಲ್ಲ ಎಂದು ಟೋಕಿಯೊ ಇಲೆಕ್ಟ್ರಿಕ್ ಪವರ್ ತಿಳಿಸಿದೆ. 2011ರ ಮಾರ್ಚ್‌ನಲ್ಲಿ ಸಂಭವಿಸಿದ ಭೂಕಂಪದ ಬಳಿಕ ಈ ಸ್ಥಾವರದಲ್ಲಿ ವಿಕಿರಣ ಸೋರಿಕೆಯಾಗಿದ್ದು, ಸಮೀಪದ ಜನರನ್ನು ಭಾರೀ ಪ್ರಮಾಣದಲ್ಲಿ ಸ್ಥಳಾಂತರಿಸಲಾಗಿತ್ತು.

ಭೂಕಂಪದ ಬಳಿಕ ಮಿಯಾಗಿ ರಾಜ್ಯದ ಕುರಿಹರ ನಗರದಲ್ಲಿರುವ ಸುಮಾರು 200 ಮನೆಗಳ ವಿದ್ಯುತ್ ಪೂರೈಕೆ ನಿಂತು ಹೋಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.

ಟೊಹೊಕು ಶಿಂಕನ್‌ಸೆನ್ ಬುಲೆಟ್ ರೈಲು ಸೇವೆಯನ್ನು ನಿಲ್ಲಿಸಲಾಗಿದೆ ಎಂದು ಎನ್‌ಎಚ್‌ಕೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News