ರೊಹಿಂಗ್ಯಾ ಶಿಬಿರದಲ್ಲಿ ಬೆಂಕಿ: 15 ಮೃತ್ಯು, 400 ಮಂದಿ ನಾಪತ್ತೆ: ವಿಶ್ವಸಂಸ್ಥೆ
ಜಿನೀವ (ಸ್ವಿಟ್ಸರ್‌ಲ್ಯಾಂಡ್), ಮಾ. 23: ಬಾಂಗ್ಲಾದೇಶದ ಕಾಕ್ಸ್‌ಬಝಾರ್‌ನಲ್ಲಿರುವ ರೊಹಿಂಗ್ಯಾ ನಿರಾಶ್ರಿತರ ಶಿಬಿರದಲ್ಲಿ ಸೋಮವಾರ ಸಂಭವಿಸಿದ ಬೃಹತ್ ಬೆಂಕಿ ಅವಗಢದಲ್ಲಿ 15 ಜನರು ಮೃತಪಟ್ಟಿರುವುದು ಈವರೆಗೆ ಖಚಿತಗೊಂಡಿದೆ ಹಾಗೂ 400 ಮಂದಿ ಈಗಲೂ ನಾಪತ್ತೆಯಾಗಿದ್ದಾರೆ ಎಂದು ವಿಶ್ವಸಂಸ್ಥೆ ಮಂಗಳವಾರ ತಿಳಿಸಿದೆ.
‘‘ಈ ಶಿಬಿರಗಳಲ್ಲಿ ಈ ಪ್ರಮಾಣದ ಬೆಂಕಿಯನ್ನು ನಾವು ಹಿಂದೆಂದೂ ನೋಡಿಲ್ಲ. ಅದು ಬೃಹತ್ ಪ್ರಮಾಣದ ವಿನಾಶಕಾರಿ ಬೆಂಕಿಯಾಗಿತ್ತು’’ ಎಂದು ಬಾಂಗ್ಲಾದೇಶದಲ್ಲಿರುವ ವಿಶ್ವಸಂಸ್ಥೆಯ ನಿರಾಶ್ರಿತರ ಘಟಕದ ಪ್ರತಿನಿಧಿ ಜೊಹಾನ್ಸ್ ವಾನ್ ಡರ್ ಕ್ಲಾವ್ ಜಿನೀವದಲ್ಲಿರುವ ಸುದ್ದಿಗಾರರಿಗೆ ಢಾಕಾದಿಂದ ವೀಡಿಯೊ ಲಿಂಕ್ ಮೂಲಕ ತಿಳಿಸಿದರು.
‘‘ಈವರೆಗೆ 15 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. 560 ಮಂದಿ ಗಾಯಗೊಂಡಿದ್ದಾರೆ. 400 ಮಂದಿ ಈಗಲೂ ನಾಪತ್ತೆಯಾಗಿದ್ದಾರೆ. ಕನಿಷ್ಠ 10,000 ಗುಡಿಸಲುಗಳು ಸುಟ್ಟುಹೋಗಿವೆ. ಅಂದರೆ, ಕನಿಷ್ಠ 45,000 ಮಂದಿ ಈಗ ನಿರ್ವಸಿತರಾಗಿದ್ದಾರೆ’’ ಎಂದು ಅವರು ಹೇಳಿದರು.