ಹಮಾವಾನ ಶೃಂಗಸಭೆ: ಪ್ರಧಾನಿ ಮೋದಿ ಸೇರಿ 40 ವಿಶ್ವನಾಯಕರಿಗೆ ಬೈಡನ್ ಆಹ್ವಾನ

Update: 2021-03-27 05:24 GMT

ವಾಷಿಂಗ್ಟನ್, ಮಾ.27: ಎಪ್ರಿಲ್ 22-23ರಂದು ನಡೆಯುವ ಹವಾಮಾನ ಕುರಿತ ನಾಯಕರ ಶೃಂಗಸಭೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್, ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 40 ಮಂದಿ ವಿಶ್ವ ಮುಖಂಡರನ್ನು ಆಹ್ವಾನಿಸಿದ್ದಾರೆ ಎಂದು ಶ್ವೇತಭವನ ಪ್ರಕಟಿಸಿದೆ. ವರ್ಚುವಲ್ ವಿಧಾನದಲ್ಲಿ ನಡೆಯುವ ಈ ಶೃಂಗಸಭೆಯ ಕಲಾಪಸಾರ್ವಜನಿಕ ವೀಕ್ಷಣೆಗಾಗಿ ಟಿವಿ ವಾಹಿನಿಗಳಲ್ಲಿ ನೇರ ಪ್ರಸಾರವಾಗಲಿದೆ.

ಹವಾಮಾನಕ್ಕೆ ಸಂಬಂಧಿಸಿದಂತೆ ಪ್ರಬಲವಾದ ಕ್ರಮ ಕೈಗೊಳ್ಳಬೇಕಾದ ತುರ್ತು ಮತ್ತು ಈ ಕ್ರಮಗಳ ಆರ್ಥಿಕ ಲಾಭವನ್ನು ಪಡೆದುಕೊಳ್ಳುವ ಸಂಬಂಧ ವಿಶ್ವ ನಾಯಕರು ಈ ವೇದಿಕೆಯಲ್ಲಿ ಚರ್ಚಿಸುವರು. ವಿಶ್ವಸಂಸ್ಥೆ ಈ ವರ್ಷದ ಗ್ಲಾಸ್ಗೋದಲ್ಲಿ ಆಯೋಜಿಸಿರುವ ಹವಾಮಾನ ಬದಲಾವಣೆ ಸಮ್ಮೇಳನ (ಸಿಓಪಿ26)ನ ಮಾರ್ಗದಲ್ಲಿ ಇದು ಐತಿಹಾಸಿಕ ಮೈಲುಗಲ್ಲು ಆಗಲಿದೆ ಎಂದು ಶ್ವೇತಭವನ ಬಣ್ಣಿಸಿದೆ.

ಚೀನಾ ಅಧ್ಯಕ್ಷ ಕ್ಸಿ ಜಿಂಗ್‌ಪಿಂಗ್, ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಜಪಾನ್ ಪಿಎಂ ಯೊಶಿಹಿದೆ ಸುಗಾ, ಬ್ರೆಝಿಲ್ ಅಧ್ಯಕ್ಷ ಜೈರ್ ಬೊಲ್ಸ್‌ನರೊ, ಕೆನಡಾ ಪ್ರಧಾನಿ ಜೆಸ್ಟಿನ್ ಟ್ರುಡೇವ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಸೌದಿ ಅರೇಬಿಯಾ ದೊರೆ ಸಲ್ಮನ್ ಬಿನ್ ಅಬ್ದುಲ್ ‌ಅಝೀಝ್, ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರನ್ನೂ ಆಹ್ವಾನಿಸಲಾಗಿದೆ.

ಈ ಎರಡು ದಿನಗಳ ಮೆಗಾ ಸಮ್ಮೇಳನಕ್ಕೆ ಆಹ್ವಾನಿತರಾದ ದಕ್ಷಿಣ ಏಷ್ಯಾ ಮುಖಂಡರಲ್ಲಿ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಮತ್ತು ಭೂತಾನ್ ಪ್ರಧಾನಿ ಲೊಟಾಯ್ ಶೆರಿಂಗ್ ಕೂಡಾ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News