ಸಂಜೀವ್-ತೇಜಸ್ವಿನಿಗೆ ಚಿನ್ನ
ಹೊಸದಿಲ್ಲಿ: ಐಎಸ್‌ಎಸ್‌ಎಫ್ ವಿಶ್ವಕಪ್‌ನ ಮಿಕ್ಸೆಡ್ ಟೀಮ್ ಸ್ಪರ್ಧೆಯ 50 ಮೀ.ರೈಫಲ್ 3 ಪೊಸಿಶನ್ಸ್‌ನಲ್ಲಿ ಭಾರತದ ಸಂಜೀವ್ ರಜಪೂತ್ ಹಾಗೂ ತೇಜಸ್ವಿನಿ ಸಾವಂತ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ಶುಕ್ರವಾರ ಚಿನ್ನ ಪದಕಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಭಾರತೀಯ ಜೋಡಿ ಉಕ್ರೇನ್‌ನ ಸೆರ್ಹಿ ಕುಲಿಶ್ ಹಾಗೂ ಅನ್ನಾ ಲಿನಾರನ್ನು 31-29 ಅಂತರದಿಂದ ಮಣಿಸಿದೆ. ಸಂಜೀವ್-ತೇಜಸ್ವಿನಿ ತಮ್ಮ ಹಲವು ವರ್ಷಗಳ ಅನುಭವವನ್ನು ಬಳಸಿಕೊಂಡು ವಿಜಯಿಶಾಲಿಯಾಗಿದ್ದಾರೆ. ಈ ಗೆಲುವಿನೊಂದಿಗೆ ಭಾರತವು ಟೂರ್ನಿಯಲ್ಲಿ ಒಟ್ಟು 11 ಚಿನ್ನದ ಪದಕಗಳನ್ನು ಜಯಿಸಿದೆ.
ಡಾ.ಕರ್ನಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಅಮೆರಿಕದ ಟಿಮೊಥಿ ಶೆರ್ರಿ ಹಾಗೂ ವಿರ್ಜಿನಿಯಾ ಥ್ರಾಶರ್ ಅವರನ್ನು 31-15 ಅಂತರದಿಂದ ಮಣಿಸಿದ ಐಶ್ವರ್ಯ ಪ್ರತಾಪ್ ಸಿಂಗ್ ಹಾಗೂ ಸುನಿಧಿ ಚೌಹಾಣ್ ಕಂಚಿನ ಪದಕ ಜಯಿಸಿದರು. ಅರ್ಹತಾ ಸುತ್ತಿನ ಅಂತ್ಯದಲ್ಲಿ 580 ಅಂಕ ಗಳಿಸಿರುವ ತೋಮರ್ ಹಾಗೂ ಚೌಹಾಣ್ ನಾಲ್ಕನೇ ಸ್ಥಾನ ಪಡೆದರು. ಈ ಮೂಲಕ ಕಂಚಿನ ಸುತ್ತಿನಲ್ಲಿ ಸ್ಪರ್ಧಿಸುವ ಅವಕಾಶ ಪಡೆದರು.