ಕಳ್ಳತನ ಮಾಡಲೆಂದು ಪೊಲೀಸ್ ಅಧಿಕಾರಿಯ ಮನೆಗೆ ನುಗ್ಗಿ ಅಲ್ಲಿಯೇ ನಿದ್ದೆ ಹೋದ ಕಳ್ಳ!

Update: 2021-03-27 10:20 GMT

ಬ್ಯಾಂಕಾಕ್ : ಥಾಯ್ಲಂಡ್ ದೇಶದ ಫೆಡ್ಚಬುನ್ ಪ್ರಾಂತ್ಯದ ಮನೆಯೊಂದಕ್ಕೆ ನುಗ್ಗಿದ ಕಳ್ಳನೊಬ್ಬ ಅಲ್ಲಿಯೇ ಆರಾಮವಾಗಿ ನಿದ್ದೆ ಹೋದ ಘಟನೆ ವರದಿಯಾಗಿದೆ. ಆದರೆ ಆತನ ದುರಾದೃಷ್ಟಕ್ಕೆ ಆತ ಕಳ್ಳತನಕ್ಕೆಂದು ನುಗ್ಗಿದ್ದ ಮನೆ ಪೊಲೀಸ್ ಅಧಿಕಾರಿಯೊಬ್ಬರದ್ದಾಗಿತ್ತು. ಆತನನ್ನು ನೋಡಿ ಆತನನ್ನು ಎಬ್ಬಿಸಿ ಪೊಲೀಸ್ ಅಧಿಕಾರಿಗಳು ಆತನನ್ನು ಬಂಧಿಸಿದ ವೀಡಿಯೋ ಈಗ ವೈರಲ್ ಆಗಿದೆ.

ಜಿಯಮ್ ಪ್ರಸೆರ್ಟ್ ಎಂಬ ಪೊಲೀಸ್ ಅಧಿಕಾರಿಯ ಮನೆಗೆ ಮುಂಜಾನೆ 2 ಗಂಟೆ ವೇಳೆ ಕಳ್ಳ ನುಗ್ಗಿದಾಗ ಅಧಿಕಾರಿ ಗಾಢ ನಿದ್ದೆಯಲ್ಲಿದ್ದರು. ಅತ್ತ ಕಳ್ಳ ಅತಿಟ್ ಕಿನ್ ಖುಂತುಡ್ ಎಂಬ 22 ಯುವಕ ಅದಾಗಲೇ ತೀವ್ರ ಸುಸ್ತುಗೊಂಡಿದ್ದನಲ್ಲದೆ ಮನೆ ಪ್ರವೇಶಿಸುತ್ತಿದ್ದಂತೆಯೇ ಅಧಿಕಾರಿಯ ಪುತ್ರಿಯ ಕೋಣೆಯಲ್ಲಿನ  ಏರ್ ಕಂಡಿಷನರ್ ಆನ್ ಮಾಡಿ ಅಲ್ಲಿಯೇ ಒಂದು ಸಣ್ಣ ನಿದ್ದೆಗೆ ಜಾರಿದ್ದ.

ಆದರೆ ಅಲ್ಲಿ ಆತನಿಗೆ ಅದೆಷ್ಟು ಆರಾಮವಾಗಿತ್ತೆಂದರೆ ಬೆಳಗ್ಗಿನ ತನಕ ಚೆನ್ನಾಗಿ ನಿದ್ದೆ  ಮಾಡಿದ್ದ. ಪುತ್ರಿ ಮನೆಯಲ್ಲಿಲ್ಲದೇ ಇದ್ದರೂ ಆಕೆಯ ಕೊಠಡಿಯಲ್ಲಿನ ಎಸಿ ಕಾರ್ಯನಿರ್ವಹಿಸುತ್ತಿದ್ದುದನ್ನು ಕಂಡ ಅಧಿಕಾರಿ ಅಲ್ಲಿಗೆ ಹೋದಾಗ ಅಪರಿಚಿತ ಆರಾಮವಾಗಿ ಚಾದರ ಹೊದ್ದು ಮಲಗಿರುವುದನ್ನು ಕಂಡು ತಮ್ಮ ಸಿಬ್ಬಂದಿಯನ್ನು ಕರೆಸಿದ್ದರು. ಅವರೆಲ್ಲರೂ ಆರಾಮವಾಗಿ ನಿದ್ದೆ ಮಾಡುತ್ತಿದ್ದ ಕಳ್ಳನನ್ನು ಎಬ್ಬಿಸುತ್ತಿರುವುದು ಹಾಗೂ ಆತ ತನ್ನ ಸುತ್ತಲೂ ಇರುವ ಪೊಲೀಸರನ್ನು ನೋಡಿ ಗರಬಡಿದವನಂತೆ ಇರುವ ವೀಡಿಯೋ ವೈರಲ್ ಆಗಿದೆ.

ಆತನನ್ನು ನಂತರ ಕೈಕೋಳ ತೊಡಿಸಿ ಠಾಣೆಗೆ ಕರೆದುಕೊಂಡು ಹೋಗಲಾಯಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News