3ನೇ ಏಕದಿನ ಪಂದ್ಯ: ಕರ್ರನ್ ಏಕಾಂಗಿ ಹೋರಾಟ ವ್ಯರ್ಥ; ರೋಚಕ ಹಣಾಹಣಿಯಲ್ಲಿ ಗೆದ್ದು ಬೀಗಿದ ಭಾರತ

Update: 2021-03-28 17:24 GMT

ಪುಣೆ: ಆಲ್ ರೌಂಡರ್ ಸ್ಯಾಮ್ ಕರ್ರನ್ ಏಕಾಂಗಿ ಹೋರಾಟದ ಹೊರತಾಗಿಯೂ ವೇಗದ ಬೌಲರ್ ಗಳಾದ ಶಾರ್ದೂಲ್ ಠಾಕೂರ್ (4-67) ಹಾಗೂ ಭುವನೇಶ್ವರ ಕುಮಾರ್(3-42) ಸಂಘಟಿತ ಹೋರಾಟದ ನೆರವಿನಿಂದ ಭಾರತ ತಂಡ ಇಂಗ್ಲೆಂಡ್ ವಿರುದ್ಧದ 3ನೇ ಹಾಗೂ ಅಂತಿಮ ಏಕದಿನ ಪಂದ್ಯವನ್ನು 7 ರನ್ ಗಳ ಅಂತರದಿಂದ ರೋಚಕವಾಗಿ ಗೆದ್ದುಕೊಂಡಿತು. ಈ ಮೂಲಕ 3 ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತು.

ಪಂದ್ಯವನ್ನು  ಕೊನೆಯ ಓವರ್ ತನಕ ಕೊಂಡೊಯ್ದ ಕರ್ರನ್ ಔಟಾಗದೆ 95 ರನ್(83 ಎಸೆತ, 9 ಬೌಂಡರಿ, 3 ಸಿಕ್ಸರ್) ಗಳಿಸಿದರು.

ಗೆಲ್ಲಲು 330 ರನ್ ಗುರಿ ಪಡೆದ ಇಂಗ್ಲೆಂಡ್ 50 ಓವರ್ ಗಳಲ್ಲಿ 9 ವಿಕೆಟ್ ಗಳ ನಷ್ಟಕ್ಕೆ 322 ರನ್ ಗಳಿಸಿ ವೀರೋಚಿತ ಸೋಲುಂಡಿತು.

16ನೇ ಓವರ್ ನಲ್ಲಿ 95 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಗಳನ್ನು ಕಳೆದುಕೊಂಡಿದ್ದ ಇಂಗ್ಲೆಂಡ್ ಆರಂಭಿಕ ಆಘಾತಕ್ಕೆ ಒಳಗಾಯಿತು.

ಜೇಸನ್ ರಾಯ್(14), ಜಾನಿ ಬೈರ್ ಸ್ಟೋವ್(1), ಬೆನ್ ಸ್ಟೋಕ್ಸ್(35) ಹಾಗೂ ಜೋಸ್ ಬಟ್ಲರ್(15)ಬೇಗನೆ ವಿಕೆಟ್ ಕೈಚೆಲ್ಲಿದರು.

ಡೇವಿಡ್ ಮಲಾನ್(50, 50 ಎಸೆತ, 6 ಬೌಂಡರಿ)ಹಾಗೂ ಸ್ಯಾಮ್ ಕರನ್(ಔಟಾಗದೆ 95)ಒಂದಷ್ಟು ಪ್ರತಿರೋಧ ಒಡ್ಡಿದರು.

ಇಂಗ್ಲೆಂಡ್ ಆಟಗಾರರಾದ ಸ್ಯಾಮ್ ಕರ್ರನ್ ಹಾಗೂ ಜಾನಿ ಬೈರ್ ಸ್ಟೋವ್ ಕ್ರಮವಾಗಿ ಪಂದ್ಯಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಟೀಮ್ ಇಂಡಿಯಾವು ಶಿಖರ್ ಧವನ್(67), ರಿಷಭ್ ಪಂತ್(78) ಹಾಗೂ ಹಾರ್ದಿಕ್ ಪಾಂಡ್ಯ(64) ಅರ್ಧಶತಕಗಳ ಕೊಡುಗೆ ನೆರವಿನಿಂದ 329 ರನ್ ಗಳಿಸಿ ಆಲೌಟಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News