ಐಸಿಸಿ ವಿಶ್ವಕಪ್ ಸೂಪರ್ ಲೀಗ್ ಪಟ್ಟಿಯಲ್ಲಿ ಭಾರತಕ್ಕೆ 7ನೇ ಸ್ಥಾನ
ಹೊಸದಿಲ್ಲಿ: ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಏಳು ರನ್ ಅಂತರದಲ್ಲಿ ಜಯಗಳಿಸಿದ ನಂತರ ಭಾರತ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಪುರುಷರ ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೇರಿದೆ.
ಈ ಗೆಲುವು ಇಂಗ್ಲೆಂಡ್ ವಿರುದ್ಧ ಸರಣಿಯನ್ನು 2-1 ಅಂತರದಲ್ಲಿ ಜಯ ಸಾಧಿಸಲು ಭಾರತಕ್ಕೆ ನೆರವಾಗಿದೆ. ಸೋಲಿನ ಹೊರತಾಗಿಯೂ ಇಂಗ್ಲೆಂಡ್ 40 ಅಂಕಗಳೊಂದಿಗೆ ಅಗ್ರ ತಂಡವಾಗಿ ಉಳಿದಿದೆ. ಲೀಗ್‌ನಲ್ಲಿ ಇಂಗ್ಲೆಂಡ್ 9 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದು ಐದು ಪಂದ್ಯಗಳನ್ನು ಕಳೆದುಕೊಂಡಿದೆ. ಮತ್ತೊಂದೆಡೆ ಭಾರತವು ಆರು ಪಂದ್ಯಗಳನ್ನು ಆಡಿದ್ದು, ಮೂರು ಪಂದ್ಯಗಳನ್ನು ಗೆದ್ದಿದೆ 3 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಭಾರತ 29 ಅಂಕಗಳನ್ನು ಪಡೆದಿದೆ. ಸೂಪರ್ ಲೀಗ್ 2020ರ ಜುಲೈ 30 ರಂದು ಇಂಗ್ಲೆಂಡ್ ಮತ್ತು ಐರ್ಲೆಂಡ್ ತಂಡಗಳ ನಡುವಿನ ಮೂರು ಪಂದ್ಯಗಳ ಸರಣಿಯೊಂದಿಗೆ ಪ್ರಾರಂಭವಾಯಿತು. ಸ್ಪರ್ಧೆಗೆ ಅರ್ಹತೆ ಪಡೆಯಲು 2015-17ರ ಐಸಿಸಿ ವಿಶ್ವ ಕ್ರಿಕೆಟ್ ಲೀಗ್ ಚಾಂಪಿಯನ್‌ಶಿಪ್ ಗೆದ್ದ ನೆದರ್‌ಲ್ಯಾಂಡ್ ಜೊತೆಗೆ ಐಸಿಸಿಯ 12 ಪೂರ್ಣ ಸದಸ್ಯರನ್ನು ಇದು ಒಳಗೊಂಡಿದೆ.
ಭಾರತದಲ್ಲಿ ನಡೆಯಲಿರುವ 2023ರ ವಿಶ್ವಕಪ್ ಪಂದ್ಯಾವಳಿಯ ಮೊದಲ ಎಂಟರೊಳಗೆ ಸ್ಥಾನ ಪಡೆಯುವ ತಂಡಗಳು ಸ್ವಯಂಚಾಲಿತ ಅರ್ಹತೆಯನ್ನು ಪಡೆಯಲಿವೆ. ಭಾರತವು ಆತಿಥೇಯರಾಗಿರುವುದರಿಂದ ಭಾರತ ಈಗಾಗಲೇ ಸ್ವಯಂಚಾಲಿತ ಅರ್ಹತೆಯನ್ನು ಗಳಿಸಿದೆ.