ಪ್ರಧಾನಿ ಮೋದಿ ಪತ್ರಕ್ಕೆ ಪ್ರತಿಕ್ರಿಯೆ ನೀಡಿದ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದ್ದೇನು?‌

Update: 2021-03-30 16:18 GMT

ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ರವರು ಭಾರತದ ಪ್ರಧಾನಿ ನರೇಂದ್ರ ಮೋದಿ ಕಳುಹಿಸಿದ ಪತ್ರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಪತ್ರದಲ್ಲಿ “ರಚನಾತ್ಮಕ ಮತ್ತು ಫಲಿತಾಂಶ-ಆಧಾರಿತ ಸಂವಾದ” ಕ್ಕೆ ಅನುವು ಮಾಡಿಕೊಡುವ ವಾತಾವರಣವನ್ನು ಸೃಷ್ಟಿಸಲು ಕರೆ ನೀಡಿದ್ದಾರೆ ಎಂದು hindustantimes.com ವರದಿ ಮಾಡಿದೆ.

ಮಾರ್ಚ್ 23 ರಂದು ಪಾಕಿಸ್ತಾನ ದಿನಾಚರಣೆಯ ಸಂದರ್ಭದಲ್ಲಿ ಮೋದಿಯವರ ಶುಭಾಶಯ ಸಂದೇಶಕ್ಕೆ ಪ್ರತಿಕ್ರಿಯೆಯಾಗಿ ಕೋವಿಡ್ -19 ರಿಂದ ಚೇತರಿಸಿಕೊಳ್ಳುತ್ತಿರುವ ಇಮ್ರಾನ್ ಖಾನ್ ಸೋಮವಾರ ಈ ಪತ್ರವನ್ನು ಕಳುಹಿಸಿದ್ದಾರೆ. ಖಾನ್ ಅವರ ಪತ್ರದ ವಿಷಯಗಳನ್ನು ಇಸ್ಲಾಮಾಬಾದ್‌ನ ಬೆಳವಣಿಗೆಗಳ ಕುರಿತು ನಿಖರ ಮಾಹಿತಿ ಇರುವ ವ್ಯಕ್ತಿಗಳಿಂದ ದೃಢೀಕರಿಸಲಾಗಿದೆ ಎಂದು ವರದಿ ತಿಳಿಸಿದೆ.

"ಪಾಕಿಸ್ತಾನದ ಜನರು ಭಾರತ ಸೇರಿದಂತೆ ಎಲ್ಲಾ ನೆರೆಹೊರೆಯವರೊಂದಿಗೆ ಶಾಂತಿಯುತ, ಸಹಕಾರಿ ಸಂಬಂಧವನ್ನು ಬಯಸುತ್ತಾರೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಬಾಕಿ ಇರುವ ಎಲ್ಲಾ ಸಮಸ್ಯೆಗಳನ್ನು, ಅದರಲ್ಲೂ ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರ ವಿವಾದವನ್ನು ಬಗೆಹರಿಸುವಲ್ಲಿ ದಕ್ಷಿಣ ಏಷ್ಯಾದಲ್ಲಿನ ಶಾಂತಿ ಮತ್ತು ಸ್ಥಿರತೆಯು ಅನಿಶ್ಚಿತವಾಗಿದೆ ಎಂದು ನಮಗೆ ಮನವರಿಕೆಯಾಗಿದೆ” ಎಂದು ಖಾನ್ ಬರೆದಿದ್ದಾರೆ.

"ರಚನಾತ್ಮಕ ಮತ್ತು ಫಲಿತಾಂಶ-ಆಧಾರಿತ ಸಂವಾದಕ್ಕೆ ಅನುವು ಮಾಡಿಕೊಡುವ ವಾತಾವರಣವನ್ನು ಸೃಷ್ಟಿಸುವುದು ಕಡ್ಡಾಯವಾಗಿದೆ". ಕೊರೋನಾದೊಂದಿಗಿನ ಹೋರಾಟವು ಯಶಸ್ವಿಯಾಗಲಿ ಎಂದು ಎಲ್ಲ ಭಾರತೀಯರಿಗೆ ನಾನು ಶುಭ ಹಾರೈಸುತ್ತೇನೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇಮ್ರಾನ್ ಖಾನ್ ರ ಪತ್ರಕ್ಕೆ ಭಾರತೀಯ ಅಧಿಕಾರಿಗಳಿಂದ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News