×
Ad

ಮೊಝಾಂಬಿಕ್ ಪಟ್ಟಣ ಐಸಿಸ್ ವಶಕ್ಕೆ: ಪಲಾಯನಗೈದ ನಿವಾಸಿಗಳು

Update: 2021-03-30 22:37 IST
ಸಾಂದರ್ಭಿಕ ಚಿತ್ರ

ಪೆಂಬ (ಮೊಝಾಂಬಿಕ್), ಮಾ. 30: ಐಸಿಸ್ ಭಯೋತ್ಪಾದಕರ ದಾಳಿಗೆ ಒಳಗಾಗಿರುವ ಮೊಝಾಂಬಿಕ್ ದೇಶದ ಪಾಲ್ಮ ಎಂಬ ಪಟ್ಟಣ ನಿರ್ಜನವಾಗಿದೆ. ಈ ಪಟ್ಟಣದ ಮೇಲೆ ತಾನು ನಿಯಂತ್ರಣ ಸಾಧಿಸಿದ್ದೇನೆ ಎಂಬುದಾಗಿ ಭಯೋತ್ಪಾದಕ ಸಂಘಟನೆ ಘೋಷಿಸಿದ ಬಳಿಕ ಅಲ್ಲಿನ ಜನರು ರಸ್ತೆ ಮತ್ತು ದೋಣಿಗಳ ಮೂಲಕ ಹಾಗೂ ನಡೆದುಕೊಂಡೇ ಪಲಾಯನಗೈಯುತ್ತಿದ್ದಾರೆ.

ಐಸಿಸ್ ಜೊತೆಗೆ ನಂಟು ಹೊಂದಿರುವ ಭಯೋತ್ಪಾದಕರು ಕಳೆದ ಬುಧವಾರ ಈ ನಗರದ ಮೇಲೆ ಆಕ್ರಮಣ ನಡೆಸಿದ್ದರು. ಈ ದಾಳಿಯಲ್ಲಿ ಹತ್ತಾರು ಮಂದಿ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅನಿರ್ದಿಷ್ಟ ಸಂಖ್ಯೆಯ ಜನರು ನಾಪತ್ತೆಯಾಗಿದ್ದಾರೆ.

ಮೊಝಾಂಬಿಕ್‌ನಲ್ಲಿ ಫ್ರಾನ್ಸ್ ಮತ್ತು ಇತರ ದೇಶಗಳ ಬೃಹತ್ ಇಂಧನ ಕಂಪೆನಿಗಳು ಬೃಹತ್ ಅನಿಲ ಸ್ಥಾವರವೊಂದನ್ನು ನಿರ್ಮಿಸುತ್ತಿವೆ. ಈ ಯೋಜನೆಯು ಕಾರ್ಯಗತಗೊಳ್ಳುತ್ತಿರುವ ಪರ್ಯಾಯ ದ್ವೀಪವು ಐಸಿಸ್ ಉಗ್ರರ ದಾಳಿಗೆ ಒಳಗಾದ ಪಟ್ಟಣಕ್ಕಿಂತ ಕೇವಲ 10 ಕಿ.ಮೀ. ದೂರದಲ್ಲಿದೆ.

‘‘ಕಲೀಫೇಟ್ ಸೈನಿಕರು ಆಯಕಟ್ಟಿನ ಪಾಲ್ಮ ನಗರವನ್ನು ವಶಪಡಿಸಿಕೊಂಡಿದ್ದಾರೆ’’ ಎಂದು ಐಸಿಸ್ ತನ್ನ ಟೆಲಿಗ್ರಾಮ್ ಚಾನೆಲ್‌ಗಳಲ್ಲಿ ಹಾಕಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಕಬೊ ಡೆಲ್ಗಾಡೊ ರಾಜ್ಯದಲ್ಲಿರುವ 75,000 ಜನಸಂಖ್ಯೆಯ ಪಾಲ್ಮ ಪಟ್ಟಣದಿಂದ ಬಹುತೇಕ ಎಲ್ಲ ನಿವಾಸಿಗಳನ್ನು ತೆರವುಗೊಳಿಸಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News