ಕೊರೋನ ಸೋಂಕು : ಟೋಕಿಯೊ ಒಲಿಂಪಿಕ್ಸ್‌ನಿಂದ ಹಿಂದೆ ಸರಿದ ಉತ್ತರ ಕೊರಿಯಾ

Update: 2021-04-06 03:59 GMT

ಸಿಯೋಲ್ : ಕೊರೋನ ವೈರಸ್ ಸೋಂಕಿನ ಕಾರಣದಿಂದಾಗಿ ಈ ಬಾರಿಯ ಟೋಕಿಯೊ ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಉತ್ತರ ಕೊರಿಯಾ ಘೋಷಿಸಿದೆ.

ನನೆಗುದಿಗೆ ಬಿದ್ದಿರುವ ಶಾಂತಿ ಮಾತುಕತೆಗೆ ಕ್ರೀಡೆಗಳು ಮಧ್ಯವರ್ತಿಯಾಗುತ್ತವೆ ಎಂಬ ನಿರೀಕ್ಷೆಯಲ್ಲಿದ್ದ ದಕ್ಷಿಣ ಕೊರಿಯಾಗೆ ನೆರೆ ರಾಷ್ಟ್ರದ ಈ ನಿರ್ಧಾರದಿಂದ ತೀವ್ರ ನಿರಾಸೆಯಾಗಿದೆ.

ಶೀತಲ ಸಮರದ ಹಿನ್ನೆಲೆಯಲ್ಲಿ 1988ರ ಸಿಯೋಲ್ ಒಲಿಂಪಿಕ್ಸ್ ಬಹಿಷ್ಕರಿಸಿದ್ದು, ಹೊರತುಪಡಿಸಿದರೆ ಇದೇ ಮೊದಲ ಬಾರಿಗೆ ಒಲಿಂಪಿಕ್ ಕಣವನ್ನು ಉತ್ತರ ಕೊರಿಯಾ ತಪ್ಪಿಸಿಕೊಳ್ಳುತ್ತಿದೆ. ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾದ ಜಂಟಿ ತಂಡವನ್ನು ಕಣಕ್ಕೆ ಇಳಿಸುವ ಮೂಲಕ ಉಭಯ ದೇಶಗಳ ನಡುವಿನ ಸಂಬಂಧ ಸುಧಾರಣೆಗೆ ಚಾಲನೆ ನೀಡುವ ಪ್ರಯತ್ನವನ್ನು ದಕ್ಷಿಣ ಕೊರಿಯಾ ನಡೆಸಿತ್ತು. ಆದರೆ ಉತ್ತರ ಕೊರಿಯಾದ ದಿಢೀರ್ ನಿರ್ಧಾರ ದಕ್ಷಿಣ ಕೊರಿಯಾ ಆಸೆಗೆ ತಣ್ಣೀರೆರಚಿದೆ.

2032ರ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಜಂಟಿ ಆತಿಥ್ಯ ವಹಿಸುವ ಬಗ್ಗೆಯೂ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಮತ್ತು ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಈ ಹಿಂದೆ ನಿರ್ಧಾರಕ್ಕೆ ಬಂದಿದ್ದರು. 2018ರಲ್ಲಿ ದಕ್ಷಿಣ ಕೊರಿಯಾ ಪ್ಯಾಂಗ್‌ಚಾಂಗ್ ಚಳಿಗಾಲದ ಒಲಿಂಪಿಕ್ಸ್ ಆಯೋಜಿಸಿದ್ದಾಗ ಉತ್ತರ ಕೊರಿಯಾ ಅಧ್ಯಕ್ಷರು ತಮ್ಮ ಸಹೋದರಿ ನೇತೃತ್ವದ ನಿಯೋಗ ಕಳುಹಿಕೊಟ್ಟಿದ್ದರು. ಉಭಯ ತಂಡಗಳು ಒಂದೇ ಧ್ವಜದಡಿ ಪಥಸಂಚಲನ ನಡೆಸಿ ಗಮನ ಸೆಳೆದಿದ್ದವು. ಜತೆಗೆ ಮಹಿಳಾ ಐಸ್ ಹಾಕಿಯಲ್ಲಿ ಜಂಟಿ ತಂಡವನ್ನು ಕಣಕ್ಕೆ ಇಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News