ಮೊಯಿನ್ ಅಲಿ ಬಗ್ಗೆ ಅವಹೇಳನಕಾರಿ ಟ್ವೀಟ್ ಮಾಡಿದ ತಸ್ಲೀಮಾ ನಸ್ರೀನ್ ಗೆ ತಿರುಗೇಟು ನೀಡಿದ ಜೋಫ್ರಾ ಆರ್ಚರ್

Update: 2021-04-06 14:21 GMT
ಜೋಫ್ರಾ ಆರ್ಚರ್ / ಮೊಯಿನ್ ಅಲಿ / ತಸ್ಲೀಮಾ ನಸ್ರೀನ್ (Photo:PTI)

ಲಂಡನ್: ವಿಶ್ವಕಪ್ ಹೀರೊ ಮತ್ತು ಇಂಗ್ಲೆಂಡ್ ವೇಗದ ಬೌಲರ್ ಜೋಫ್ರಾ ಆರ್ಚರ್ ಅವರು ತನ್ನ ತಂಡದ ಸಹ ಆಟಗಾರ ಮೊಯಿನ್ ಅಲಿ ಅವರ ಕುರಿತಾಗಿ ಅವಹೇಳನಕಾರಿ ಟ್ವೀಟ್ ಮಾಡಿದ ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ಗೆ ಮಂಗಳವಾರ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ್ದಾರೆ.

ವಿವಾದಾತ್ಮಕ ಲೇಖಕಿ ತಸ್ಲಿಮಾ ನಸ್ರೀನ್, ಮೊಯಿನ್ ಅಲಿಯ ಬಗ್ಗೆ ಪ್ರತಿಕ್ರಿಯಿಸಿ, ಇಂಗ್ಲೆಂಡ್ ಆಲ್ ರೌಂಡರ್ ಅಲಿ ಅವರು ಕ್ರಿಕೆಟ್ ನಲ್ಲಿ ತನ್ನನ್ನು ತೊಡಗಿಸಿಕೊಳ್ಳದೇ ಇರುತ್ತಿದ್ದರೆ ಅವರು ಭಯೋತ್ಪಾದಕನಾಗಲು ದೂರ ಹೋಗುತ್ತಿದ್ದರು ಎಂದು ಬರೆದಿದ್ದರು.

"ಮೊಯಿನ್ ಅಲಿ ಕ್ರಿಕೆಟ್ ನೊಂದಿಗೆ ನಂಟು ಹೊಂದಿಲ್ಲದೆ ಇರುತ್ತಿದ್ದರೆ, ಅವರು ಐಸಿಸ್ ಗೆ ಸೇರಲು ಸಿರಿಯಾಕ್ಕೆ ಹೋಗುತ್ತಿದ್ದರು" ಎಂದು ನಸ್ರೀನ್ ಬರೆದಿದ್ದಾರೆ.

“ನೀವು ಚೆನ್ನಾಗಿದ್ದೀರಾ? ನೀವು ಚೆನ್ನಾಗಿದ್ದೀರಿ ಎಂದು ನಾನು ಭಾವಿಸುವುದಿಲ್ಲ” ಎಂದು ಲೇಖಕಿ ನಸ್ರೀನ್ ಅವರ ಟ್ವೀಟ್ ಅನ್ನು ಉಲ್ಲೇಖಿಸಿ ಆರ್ಚರ್ ಪ್ರತಿಕ್ರಿಯಿಸಿದರು.

ಸೋಷಿಯಲ್ ಮೀಡಿಯಾದಲ್ಲಿ ವಿವಾದಾತ್ಮಕ ಪೋಸ್ಟ್‌ಗಳಿಗೆ ಕುಖ್ಯಾತಿ ಪಡೆದಿರುವ ನಸ್ರೀನ್, ಮೊಯಿನ್ ಅಲಿ ಕುರಿತಾಗಿ ತಾನು ಮಾಡಿದ್ದ ಪೋಸ್ಟ್ ಅನ್ನು ಸಮರ್ಥಿಸಿಕೊಂಡರು, ಆ ಪೋಸ್ಟ್ ವ್ಯಂಗ್ಯವಾದುದು. ನನ್ನ ವಿರೋಧಿಗಳು ಅದನ್ನು ನನ್ನ ವಿರುದ್ಧ ಬಳಸಿದ್ದಾರೆ ಎಂದು ಹೇಳಿದರು.

“ನಾನು ಮೊಯಿನ್ ಅಲಿ ಕುರಿತು ಮಾಡಿರುವ ಟ್ವೀಟ್ ವ್ಯಂಗ್ಯವಾದುದು ಎಂದು ದ್ವೇಷಿಗಳು ಚೆನ್ನಾಗಿ ಅರಿತ್ತಿದ್ದಾರೆ. ಆದರೆ ಅವರು ನನ್ನನ್ನು ಅವಮಾನಿಸಲು ಅದೊಂದು ವಿಷಯವನ್ನಾಗಿ ಮಾಡಿದ್ದಾರೆ’’ ಎಂದು ನಸ್ರೀನ್ ಮತ್ತೊಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.

“ಇದು ವ್ಯಂಗ್ಯವೇ? ಇದನ್ನು ನೋಡಿ ನೀವೂ ಸೇರಿದಂತೆ ಯಾರೂ ನಗುವುದಿಲ್ಲ, ಕನಿಷ್ಠ ಟ್ವೀಟ್ ಅನ್ನು ಅಳಿಸಿಹಾಕುವ ಕೆಲಸವನ್ನಾದರೂ ಮಾಡಿ”ಎಂದು ಆರ್ಚರ್ ಅವರು ತಸ್ರೀನ್ ಗೆ ಕಿವಿಮಾತು ಹೇಳಿದರು.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ರಲ್ಲಿ ಸ್ಪರ್ಧಿಸಲು ಸಜ್ಜಾಗಿರುವ ಮೊಯಿನ್ ಅಲಿ ಚೆನ್ನೈ ಸೂಪರ್ ಕಿಂಗ್ಸ್ ಜೊತೆ ಮುಂಬೈನಲ್ಲಿದ್ದಾರೆ. ಐಪಿಎಲ್ 2021 ಆಟಗಾರರ ಹರಾಜಿನಲ್ಲಿ ಅಲಿಯವರನ್ನು ಚೆನ್ನೈ ಸೂಪರ್ ಕಿಂಗ್ಸ್ 7 ಕೋಟಿ ರೂ.ಗೆ ಖರೀದಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News