ಫಿಫಾ ಅಂಡರ್-17 ಮಹಿಳಾ ವಿಶ್ವ ಕಪ್ ಟೂರ್ನಮೆಂಟ್ ನಿರ್ದೇಶಕಿ ರೋಮಾ ಖನ್ನಾ ರಾಜೀನಾಮೆ

Update: 2021-04-11 05:16 GMT

  ಹೊಸದಿಲ್ಲಿ : ಫಿಫಾ ಅಂಡರ್ -17 ಮಹಿಳಾ ವಿಶ್ವಕಪ್ ಮತ್ತು ಎಎಫ್‌ಸಿ ಮಹಿಳಾ ಏಶ್ಯನ್ ಟೂರ್ನಮೆಂಟ್‌ನ ನಿರ್ದೇಶಕಿಯಾಗಿದ್ದ ರೋಮಾ ಖನ್ನಾ ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಖನ್ನಾ ರಾಜೀನಾಮೆ ನೀಡಿದ್ದಾರೆ.

2022ರಲ್ಲಿ ಭಾರತದಲ್ಲಿ ನಡೆಯಲಿರುವ 2019ರಲ್ಲಿ ಅಂಡರ್-17 ವಿಶ್ವಕಪ್‌ಗಾಗಿ ಬಿಡ್‌ನ್ನು ಖನ್ನಾ ಮುನ್ನಡೆಸಿದ್ದರು. ಬಳಿಕ ಭಾರತದ ಸ್ಥಳೀಯ ಆಯೋಜನಾ ಸಮಿತಿಯ ಟೂರ್ನಮೆಂಟ್ ನಿರ್ದೇಶಕರಾಗಿ ನೇಮಕಗೊಂಡರು.

    ಮುಂದಿನ ವರ್ಷದ ಜನವರಿಯಲ್ಲಿ ಭಾರತ ಆತಿಥ್ಯ ವಹಿಸಲಿರುವ ಎಎಫ್‌ಸಿ ಮಹಿಳಾ ಏಶ್ಯಾಕಪ್‌ಗೆ ಬಿಡ್ ಸಲ್ಲಿಸುವಲ್ಲಿ ಅವರು ಯಶಸ್ವಿಯಾಗಿದ್ದರು.

 ‘‘ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ನಾನು ಎಐಎಫ್‌ಎಫ್ ಮತ್ತು ಫಿಫಾಗೆ ಧನ್ಯವಾದ ಹೇಳಲು ಬಯಸುತ್ತೇನೆ ’’ಎಂದು ಖನ್ನಾ ಶನಿವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ. ‘‘ಭಾರತದಲ್ಲಿ ಪಂದ್ಯಾವಳಿಯನ್ನು ಮುನ್ನಡೆಸುವುದು ಹೆಮ್ಮೆ ಮತ್ತು ಗೌರವದ ವಿಚಾರವಾಗಿದೆ. ನಾನು ಸ್ಥಳೀಯ ಸಂಘಟನಾ ಸಮಿತಿಯು ಮಾಡಿದ ಕೆಲಸದ ಬಗ್ಗೆ ಹೆಮ್ಮೆಪಡುತ್ತೇನೆ’’ ಎಂದು ಹೆಳಿದ್ದಾರೆ. ‘‘ರೋಮಾ ಭಾರತದ ಫುಟ್ಬಾಲ್‌ನ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ. ರೋಮಾ ಈಗ ಹತ್ತು ವರ್ಷಗಳಿಂದ ಎಐಎಫ್‌ಎಫ್‌ನೊಂದಿಗೆ ಸಂಬಂಧ ಹೊಂದಿದ್ದು, ದೇಶದ ಫುಟ್ಬಾಲ್‌ನ ಬೆಳವಣಿಗೆಗೆ ಶ್ರಮಿಸಿದ್ದಾರೆ’’ ಎಂದು ಎಐಎಫ್‌ಎಫ್ ಪ್ರಧಾನ ಕಾರ್ಯದರ್ಶಿ ಕುಶಾಲ್ ದಾಸ್‌ಅಭಿಪ್ರಾಯಪಟ್ಟಿದ್ದಾರೆ. ‘‘ನಾವು ದುಃಖಿತರಾಗಿದ್ದೇವೆ ಆದರೆ ಅವರ ವೈಯಕ್ತಿಕ ನಿರ್ಧಾರವನ್ನು ಪೂರ್ಣ ಹೃದಯದಿಂದ ಗೌರವಿಸುತ್ತೇವೆ ಮತ್ತು ಭವಿಷ್ಯಕ್ಕಾಗಿ ಅವರಿಗೆ ಶುಭ ಹಾರೈಸುತ್ತೇವೆ’’ ಎಂದು ದಾಸ ಹೇಳಿದ್ದಾರೆ. ಭಾರತವು ನವೆಂಬರ್ 2ರಿಂದ 21ರವರೆಗೆ 2020ರ ಆವೃತ್ತಿಯನ್ನು ಆಯೋಜಿಸಲು ನಿರ್ಧರಿಸಿತ್ತು.ಆದರೆ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಇದನ್ನು ರದ್ದುಗೊಳಿಸಲಾಯಿತು.2022ರಲ್ಲಿ ಮುಂದಿನ ಆವೃತ್ತಿಗೆ ಆತಿಥೇಯರಾಗಿ ಫಿಫಾ ಭಾರತವನ್ನು ಘೋಷಿಸಿತು. ಟೂರ್ನಮೆಂಟ್‌ಗೆ ಹೊಸ ನಿರ್ದೇಶಕರನ್ನು ನೇಮಿಸಲು ಎಐಎಫ್‌ಎಫ್ ಫಿಫಾದೊಂದಿಗೆ ಮಾತುಕತೆ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News