ಧೋನಿ ವಿಕೆಟ್ ಪಡೆದು ದೀರ್ಘ ಕನಸು ಈಡೇರಿಸಿಕೊಂಡ ಅವೇಶ್

Update: 2021-04-13 05:08 GMT
photo: BCCI

ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ರವಿವಾರ ಆಡಿರುವ ಮೊದಲ ಐಪಿಎಲ್ ಪಂದ್ಯದಲ್ಲಿ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿಕೆಟನ್ನು ಪಡೆಯುವುದರೊಂದಿಗೆ ನನ್ನ ದೀರ್ಘ ಕಾಲದ ಕನಸೊಂದು ಈಡೇರಿದೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗದ ಬೌಲರ್ ಅವೇಶ್ ಖಾನ್ ಹೇಳಿದ್ದಾರೆ.

 ಸಿಎಸ್‌ಕೆ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ ಇಂದೋರ್‌ನ 24ರ ಹರೆಯದ ಅವೇಶ್ ಖಾನ್ ಧೋನಿ ಹಾಗೂ ದಕ್ಷಿಣ ಆಫ್ರಿಕಾದ ಎಫ್‌ಡು ಪ್ಲೆಸಿಸ್ ವಿಕೆಟನ್ನು ಉರುಳಿಸಿದ್ದರು. ‘‘ಮೂರು ವರ್ಷಗಳ ಹಿಂದೆ ನನಗೆ ಧೋನಿ ಅವರ ವಿಕೆಟ್ ಪಡೆಯುವ ಅವಕಾಶ ಲಭಿಸಿತ್ತು. ಆದರೆ, ಅವರು ನೀಡಿದ್ದ ಕ್ಯಾಚ್ ಕೈಚೆಲ್ಲಲಾಗಿತ್ತು. ಇದೀಗ ಧೋನಿ ಅವರ ವಿಕೆಟ್ ಪಡೆಯುವ ನನ್ನ ಕನಸು ಈಡೇರಿದೆ. ಇದಕ್ಕಾಗಿ ನನಗೆ ತುಂಬಾ ಸಂತೋಷವಾಗಿದೆ’’ ಎಂದು ಅವೇಶ್ ಹೇಳಿದರು.

ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಖಾನ್ 23 ರನ್‌ಗೆ 2 ವಿಕೆಟ್‌ಗಳನ್ನು ಕಬಳಿಸಿ ಸಿಎಸ್‌ಕೆ ತಂಡವನ್ನು 7 ವಿಕೆಟ್‌ಗೆ 188 ರನ್‌ಗೆ ನಿಯಂತ್ರಿಸಿದ್ದರು. ದಿಲ್ಲಿಯು 18.4 ಓವರ್‌ಗಳಲ್ಲಿ ಗುರಿ ತಲುಪಿ ಟೂರ್ನಿಯಲ್ಲಿ ಗೆಲುವಿನ ಅಭಿಯಾನ ಆರಂಭಿಸಿತು.

‘‘ನಮ್ಮ ಮೊದಲ ಪಂದ್ಯದಲ್ಲಿ ನನ್ನ ಪ್ರದರ್ಶನ ತುಂಬಾ ಖುಷಿಕೊಟ್ಟಿದೆ. ತಂಡವು ಗೆಲುವು ಸಾಧಿಸಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಧೋನಿ ಹಾಗೂ ಪ್ಲೆಸಿಸ್ ವಿಕೆಟನ್ನು ಪಡೆಯುವ ಮೂಲಕ ನನ್ನ ತಂಡವನ್ನು ಉತ್ತಮ ಸ್ಥಿತಿಯಲ್ಲಿರಿಸಿದ್ದೆ. ಮೊದಲ ಪಂದ್ಯದ ಗೆಲುವಿನ ಬಳಿಕ ಎಲ್ಲ ಆತ್ಮವಿಶ್ವಾಸ ಹೆಚ್ಚಾಗಿದ್ದು, ಇದನ್ನು ಮುಂದುವರಿಸುವ ವಿಶ್ವಾಸವಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News