ನವಾಲ್ನಿ ಪ್ರಾಣಕ್ಕೆ ಅಪಾಯವಿದೆ: ರಶ್ಯದ ಪ್ರತಿಪಕ್ಷ ನಾಯಕನ ವೈದ್ಯರ ಆತಂಕ

Update: 2021-04-18 16:45 GMT

ಮಾಸ್ಕೋ,ಎ.18: ಜೈಲಿನಲ್ಲಿರುವ ರಶ್ಯದ ಪ್ರತಿಪಕ್ಷ ನಾಯಕ ಅಲೆಕ್ಸಿಯಿ ನವಾಲ್ನಿ ಅವರ ಆರೋಗ್ಯ ಸ್ಥಿತಿ ತ್ವರಿತವಾಗಿ ಹದಗೆಡುತ್ತಿರುವುದಾಗಿ ಅವರ ಖಾಸಗಿ ವೈದ್ಯರೊಬ್ಬರು ತಿಳಿಸಿದ್ದಾರೆ.

 ಹಾಗೂ ರಶ್ಯದ ಅಧ್ಯಕ್ಷ ಪುತಿನ್ ಅವರ ತೀವ್ರ ಟೀಕಾಕಾರನಾದ 44 ವರ್ಷ ಪ್ರಾಯದ ಅಲೆಕ್ಸಿಯಿ ನವಾಲ್ನಿ ಅವರು ತನ್ನ ವೈದ್ಯರಿಗೆ ತನ್ನನ್ನು ಭೇಟಿ ಮಾಡಲು ಅವಕಾಶ ನೀಡದೆ ಇರುವುದನ್ನು ಪ್ರತಿಭಟಿಸಿ ಕಾರಾಗೃಹದಲ್ಲಿ ನಿರಶನ ನಡೆಸುತ್ತಿದ್ದಾರೆ.

    ಜೈಲಿನಲ್ಲಿರುವ ನವಾಲ್ನಿ ಅವರ ದೇಹದಲ್ಲಿ ಪೊಟ್ಯಾಶಿಯಂನ ಮಟ್ಟ ಹೆಚ್ಚಾಗುತ್ತಿದ್ದು ಇದರಿಂದ ಹೃದಯಾಘಾತವಾಗುವ ಸಾಧ್ಯತೆಯಿದೆ ಮತ್ತು ಕ್ರಿಟೆನೈನ್ ಮಟ್ಟದ ಏರಿಕೆಯಿಂದಾಗಿ ಅವರ ಮೂತ್ರಜನಕಾಂಗಕ್ಕೆ ಹಾನಿಯಾಗುವ ಅಪಾಯವಿದೆಯೆಂದು ನವಾಲ್ನಿ ಅವರ ಕುಟುಂಬಕ್ಕೆ ಲಭ್ಯವಾಗಿರುವ ವೈದ್ಯಕೀಯ ಪರೀಕ್ಷಾ ವರದಿಗಳಿಂದ ಕಂಡುಬಂದಿರುವುದಾಗಿ ಖ್ಯಾತ ವೈದ್ಯ ಯಾರೊಸ್ಲಾವ್ ಅಶಿಕ್‌ಮಿನ್ ತಿಳಿಸಿದ್ದಾರೆ. ‘‘ನಮ್ಮ ರೋಗಿಯು ಯಾವುದೇ ಸಂದರ್ಭದಲ್ಲಿಯೂ ಸಾವನ್ನಪ್ಪಬಹುದಾಗಿದೆ’’ ಎಂದು ಅವರು ಫೇಸ್‌ಬುಕ್‌ನಲ್ಲಿ ಪ್ರಸಾರ ಮಾಡಿದ ಪೋಸ್ಟ್‌ನಲ್ಲಿ ಹೇಳಿದ್ದಾರೆ.

  ನವಾಲ್ನಿ ಅವರಿಗೆ ಸೂಕ್ತ ಚಿಕಿತ್ಸೆ ದೊರೆಯುವಂತೆ ಮಾಡಲು ತಕ್ಷಣವೇ ಕ್ರಮಗಳನ್ನು ಕೈಗೊಳ್ಳಬೇಕೆಂದು ನವಾಲ್ನಿ ಬೆಂಬಲಿತ ವೈದ್ಯರ ಮೈತ್ರಿಕೂಟದ ಅಧ್ಯಕ್ಷೆ ಅನಾಸ್ತೆಸಿಯಾ ವಸಿಲೆವ್ಲೆಯಾ ಅವರು ನವಾಲ್ನಿ ಚಿಕಿತ್ಸೆಗೆ ತಕ್ಷಣವೇ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ನವಾಲ್ನಿ ಅವರ ಖಾಸಗಿ ವೈದ್ಯರಿಗೂ ಅವರನ್ನು ಜೈಲಿನಲ್ಲಿ ಭೇಟಿಯಾಗುವುದಕ್ಕೆ ಅವಕಾಶ ನೀಡುತ್ತಿಲ್ಲವೆಂದು ಬೆಂಬಲಿಗರು ಆಪಾದಿಸಿದ್ದಾರೆ.

  ನವಾಲ್ನಿ ಅವರು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಪ್ರಬಲ ಎದುರಾಳಿಯಾಗಿದ್ದಾರೆ. ಜೈಲಿನಲ್ಲಿ ತನಗೆ ಬೆನ್ನುನೋವು ಹಾಗೂ ಕಾಲು ನಿಷ್ಕ್ರಿಯವಾಗುತ್ತಿರುವುದಕ್ಕಾಗಿ ಚಿಕಿತ್ಸೆ ನೀಡಲು ತನ್ನ ವೈದ್ಯರಿಗೆ ಅವಕಾಶ ನೀಡುತ್ತಿಲ್ಲವೆಂದು ಆಪಾದಿಸಿ ನವಾಲ್ನಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಆದರೆ ರಶ್ಯದ ಸರಕಾರಿ ಚಿಕಿತ್ಸಾ ಸೇವಾ ಇಲಾಖೆಯು ಈ ಆರೋಪಗನ್ನು ನಿರಾಕರಿಸಿದ್ದು, ನವಾಲ್ನಿ ಅವರಿಗೆ ಎಲ್ಲಾ ವಿಧದ ವೈದ್ಯಕೀಯ ನೆರವನ್ನು ನೀಡಲಾಗುತ್ತಿದೆಯೆಂದು ಅದು ಹೇಳಿದೆ.

       ರಶ್ಯದಲ್ಲಿ ನರ್ವ್ ಏಜೆಂಟ್ ವಿಶಪ್ರಾಶನದ ಬಳಿಕ ನವಾಲ್ನಿ ಅವರು ಜರ್ಮನಿಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಈ ವರ್ಷದ ಜನವರಿ 17ರಂದು ರಶ್ಯಕ್ಕೆ ಆಗಮಿಸಿದ ಅವನ್ನು ಬಂಧಿಸಲಾಗಿತ್ತು.

 ವಂಚನೆ ಪ್ರಕರಣವನ್ನು ಎದುರಿಸುತ್ತಿದ್ದ ಅವರು ಜರ್ಮನಿಯಲ್ಲಿ ಚಿಕಿತ್ಸೆ ಪಡೆದ ಅವಧಿಯಲ್ಲಿ ಅವರ ಜೈಲು ವಾಸವನ್ನು ಅಮಾನತಿನಲ್ಲಿರಿಸಲಾಗಿತ್ತು. ಆದರೆ ನಿಯಮಗಳನನು ಉಲ್ಲಂಘಿಸಿ ಚಿಕಿತ್ಸೆಯ ನೆಪದಲ್ಲಿ ದೀರ್ಘ ಕಾಲ ಜರ್ಮನಿಯಲ್ಲಿ ನೆಲೆಸಿದ್ದಕ್ಕಾಗಿ ನ ನವಾಲ್ನಿ ಅವರಿಗೆ ಎರಡೂವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆದರೆ ಈ ಆರೋಪವನ್ನು ನವಾಲ್ನಿ ನಿರಾಕರಿಸಿದ್ದು ರಾಜಕೀಯ ದುರುದ್ದೇಶದಿಂದ ತನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆಯೆಂದು ನವಾಲ್ನಿ ಆಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News