ಬಾಂಗ್ಲಾ: ಮೋದಿ ಭೇಟಿ ವಿರುದ್ಧ ಪ್ರತಿಭಟನೆ ನಡೆಸಿದ ನೂರಾರು ಮಂದಿಯ ಬಂಧನ

Update: 2021-04-18 16:53 GMT

   ಢಾಕಾ,ಎ.18: ಪ್ರಧಾನಿ ನರೇಂದ್ರ ಮೋದಿಯವರ ಢಾಕಾ ಭೇಟಿಯನ್ನು ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆಗಳನ್ನು ನಡೆಸಿದ ನೂರಾರು ತೀವ್ರವಾದಿ ಧಾರ್ಮಿಕ ಸಂಘಟನೆಗಳ ಕಾರ್ಯಕರ್ತರನ್ನು ಕಳೆದ ಒಂದು ವಾರದಿಂದ ಬಾಂಗ್ಲಾ ಪೊಲೀಸರು ಬಂಧಿಸಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ.

ಮಾರ್ಚ್ ಅಂತ್ಯದಲ್ಲಿ ಮೋದಿ ವಿರುದ್ಧ ಬಾಂಗ್ಲಾದ ವಿವಿಧೆಡೆ ನಡೆದ ಪ್ರತಿಭಟನೆಯಲ್ಲಿ ಕನಿಷ್ಠ 13 ಮಂದಿ ಪ್ರತಿಭಟನಕಾರರು ಮೃತಪಟ್ಟಿದ್ದರು ಹಾಗೂ ನೂರಾರು ಮಂದಿ ಗಾಯಗೊಂಡಿದ್ದರು.

ಮೋದಿ ಭೇಟಿ ವಿರುದ್ಧ ಬಾಂಗ್ಲಾದ ವಿವಿಧ ಜಿಲ್ಲೆಗಳಲ್ಲಿ ನಡೆದ ಪ್ರತಿಭಟನೆಯ ನೇತೃತ್ವವನ್ನು ಹಿಫಾಝತೆ ಇಸ್ಲಾಂ ವಹಿಸಿತ್ತು. ಭಾರತದಲ್ಲಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆಂದು ಹಿಫಾಝತೆ ಇಸ್ಲಾಂ ಸಂಘಟನೆಯ ಕಾರ್ಯಕರ್ತರು ಆಪಾದಿಸುತ್ತಿದ್ದಾರೆ.

   ಢಾಕಾದಲ್ಲಿ ಇಸ್ಲಾಂ ಧಾರ್ಮಿಕ ಶಿಕ್ಷಣ ಕೇಂದ್ರವೊಂದರ ಮೇಲೆ ರವಿವಾರ ದಾಳಿ ನಡೆಸಿದ ಪೊಲೀಸರು ಹಿಫಾಝತೆ ಇಸ್ಲಾಂನ ಜಂಟಿ ಕಾರ್ಯದರ್ಶಿ ಮಾಮುನುಲ್ ಹಖ್ ಅವರನ್ನು ಬಂಧಿಸಿದ್ದಾರೆ. ಹಕ್ ಅವರು ಕಳೆದ ಒಂದು ವಾರದಲ್ಲಿ ಬಾಂಗ್ಲಾ ಪೊಲೀಸರಿಂದ ಬಂಧಿತರಾದ ಹಿಫಾಝತೆ ಇಸ್ಲಾಂನ ಏಳನೇ ಹಿರಿಯ ನಾಯಕರಾಗಿದ್ದಾರೆ.

 ಈ ಮಧ್ಯೆ ವ್ಯಾಪಕವಾದ ಮೋದಿ ವಿರೋಧಿ ಪ್ರತಿಭಟನೆಗೆ ಸಾಕ್ಷಿಯಾದ ಬ್ರಾಹ್ಮಣ್‌ಬಾರಿಯಾ ಜಿಲ್ಲೆಯಲ್ಲಿ 298ಕ್ಕೂ ಅಧಿಕ ಹಿಫಾಝತೆ ಬೆಂಬಲಿಗರನ್ನು ಹಾಗೂ ಕಾರ್ಯಕರ್ತರನ್ನು ಬಂಧಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

 ಈ ಮಧ್ಯೆ ಹಿಫಾಝತ್ ಇಸ್ಲಾಂನ ವಕ್ತಾರ ಝಕಾರಿಯಾ ನೊಮಾನ್ ಎಎಫ್‌ಪಿ ಸುದ್ದಿಸಂಸ್ಥೆಯ ಜೊತೆ ಮಾತನಾಡುತ್ತಾ ತನ್ನ ಸಂಘಟನೆಯ 25ಕ್ಕೂ ಅಧಿಕ ಹಿರಿಯ ನಾಯಕರನ್ನು ಪೊಲೀಸರು ಬಂಧಿಸಿದ್ದು, ಅವರ ವಿರುದ್ಧ ಸುಳ್ಳು ಹಾಗೂ ಕಪೋಲಕಲ್ಪಿತ ಆರೋಪಗಳನ್ನು ಹೊರಿಸಲಾಗಿದೆಯೆಂದು ಆಪಾದಿಸಿದ್ದಾರೆ.

 2010ರಲ್ಲಿ ಸ್ಥಾಪನೆಯಾದ ಹಿಫಾಝತೆ ಇಸ್ಲಾಂ ಬಾಂಗ್ಲಾದ ಅತಿ ದೊಡ್ಡ ತೀವ್ರವಾದಿ ಸಂಘಟನೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News