ತಂದೆಯನ್ನು ನೋಡಲು ವೈದ್ಯರಿಗೆ ಅನುಮತಿ ನೀಡಿ

Update: 2021-04-19 17:22 GMT

ಮಾಸ್ಕೋ (ರಶ್ಯ), ಎ. 19: ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರಶ್ಯ ಪ್ರತಿಪಕ್ಷ ನಾಯಕ ಅಲೆಕ್ಸಿ ನವಾಲ್ನಿಯ ಜೀವದ ಬಗ್ಗೆ ಜಗತ್ತಿನಾದ್ಯಂತ ಕಳವಳ ಹೆಚ್ಚುತ್ತಿರುವಂತೆಯೇ, ‘‘ನನ್ನ ತಂದೆಯನ್ನು ನೋಡಲು ವೈದ್ಯರಿಗೆ ಅನುಮತಿ ನೀಡಿ’’ ಎಂಬುದಾಗಿ ಅವರ ಮಗಳು ಟ್ವಿಟರ್‌ನಲ್ಲಿ ಮನವಿ ಮಾಡಿದ್ದಾರೆ.

ಉಪವಾಸದಿಂದಾಗಿ ನವಾಲ್ನಿಯ ದೇಹ ವ್ಯವಸ್ಥೆ ವೇಗವಾಗಿ ಹದಗೆಡುತ್ತಿದೆಯೆನ್ನಲಾಗಿದ್ದು, ತನ್ನ ವೈದ್ಯರನ್ನು ನೋಡಲು ಅಧಿಕಾರಿಗಳು ಅವರಿಗೆ ಅವಕಾಶ ನೀಡುತ್ತಿಲ್ಲ.

ರಶ್ಯದ ಜೈಲೊಂದರಲ್ಲಿ ಅವರು ನಡೆಸುತ್ತಿರುವ ಉಪವಾಸ 19ನೇ ದಿನವನ್ನು ಪ್ರವೇಶಿಸಿದೆ.

ನವಾಲ್ನಿಯ 20 ವರ್ಷದ ಮಗಳು ಡಾರಿಯ ನವಾಲ್ನಿಯ ಕ್ಯಾಲಿಫೋರ್ನಿಯದ ಸ್ಟಾನ್‌ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ ಕಲಿಯುತ್ತಿದ್ದಾರೆ.

ನವಾಲ್ನಿ ಸಾಯುತ್ತಿದ್ದಾರೆ ಎಂಬುದಾಗಿ ಅವರ ಪತ್ರಿಕಾ ಕಾರ್ಯದರ್ಶಿ ಕೆ.ಡಬ್ಲ್ಯು. ವಿರಾ ಯಾರ್ಮಿಶ್ ಟ್ವೀಟ್ ಮಾಡಿದ್ದಾರೆ. ‘‘ಅವರ ಬದುಕು ಇನ್ನು ಕೆಲವು ದಿನಗಳು ಮಾತ್ರ’’ ಎಂದು ಅವರು ಹೇಳಿದ್ದಾರೆ.

ಅವರ ಹೃದಯ ಯಾವುದೇ ಕ್ಷಣದಲ್ಲಿ ಸ್ತಂಭಿಸಬಹುದು ಎಂದು ಹಲವು ವೈದ್ಯರು ಹೇಳಿದ್ದಾರೆ.

ರಶ್ಯದ ನಗರಗಳಲ್ಲಿ ಬುಧವಾರ ಸಂಜೆ ಹೊಸದಾಗಿ ಪ್ರತಿಭಟನೆಗಳನ್ನು ನಡೆಸುವುದಾಗಿ ಅವರ ತಂಡ ರವಿವಾರ ಘೋಷಿಸಿದೆ.

ಓರ್ವ ವ್ಯಕ್ತಿಯನ್ನು ಅವರು ಹೇಗೆ ಕೊಲ್ಲುತ್ತಾರೆ ಎನ್ನುವುದನ್ನು ನೋಡಬೇಕೇ?

‘‘ಓರ್ವ ವ್ಯಕ್ತಿಯನ್ನು ಅವರು ಹೇಗೆ ಕೊಲ್ಲುತ್ತಾರೆ ಎನ್ನುವುದನ್ನು ನಿಮ್ಮದೇ ಕಣ್ಣುಗಳಲ್ಲಿ ನೀವು ಯಾವತ್ತಾದರೂ ನೋಡಿದ್ದೀರಾ’’ ಎಂಬುದಾಗಿ ಹೇಳಿಕೆಯೊಂದರಲ್ಲಿ ನವಾಲ್ನಿಯ ಪ್ರತಿನಿಧಿಯೊಬ್ಬರು ಕೇಳಿದ್ದಾರೆ.

‘‘ಈಗ ನೀವು ಅದನ್ನು ನೋಡುತ್ತಿದ್ದೀರಿ... ಅವರು ಅಲೆಕ್ಸಿ ನವಾಲ್ನಿಯನ್ನು ಕೊಲ್ಲುತ್ತಿದ್ದಾರೆ, ಭೀಕರವಾಗಿ. ನಮ್ಮೆಲ್ಲರ ಎದುರಲ್ಲಿ’’ ಎಂದು ಅವರು ಹೇಳಿದ್ದಾರೆ.

ಖ್ಯಾತನಾಮರಿಂದ ಪುಟಿನ್‌ಗೆ ಮನವಿ

ಅಲೆಕ್ಸಿ ನವಾಲ್ನಿಗೆ ತನ್ನ ವೈದ್ಯರನ್ನು ನೋಡಲು ಅವಕಾಶ ನೀಡಿ ಎಂಬುದಾಗಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ಗೆ ಕರೆ ನೀಡುವ ಪತ್ರವೊಂದನ್ನು ಹಲವಾರು ಲೇಖಕರು, ನಟರು, ಇತಿಹಾಸ ತಜ್ಞರು ಮತ್ತು ಇತರ ಖ್ಯಾತನಾಮರು ‘ಎಕನಾಮಿಸ್ಟ್’ ಮತ್ತು ‘ಲೆ ಮಾಂಡ್’ ಪತ್ರಿಕೆಯಲ್ಲಿ ಶುಕ್ರವಾರ ಪ್ರಕಟಿಸಿದ್ದಾರೆ.

ರಶ್ಯದ ಕೃತ್ಯಗಳು ‘ಸಂಪೂರ್ಣ ಅನ್ಯಾಯವಾಗಿವೆ’’ ಹಾಗೂ ‘‘ಸಂಪೂರ್ಣ ಅನುಚಿತವಾಗಿವೆ’’ ಎಂಬುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಶನಿವಾರ ಬಣ್ಣಿಸಿದ್ದಾರೆ.

ರಿಸೀವರ್ ಕೆಳಗಿಟ್ಟು ಮಲಗಿದರು: ನವಾಲ್ನಿ ಪತ್ನಿ

ಜೈಲಿನಲ್ಲಿ ನವಾಲ್ನಿಯನ್ನು ಮೊದಲ ಬಾರಿಗೆ ಭೇಟಿಯಾಗಲು ಅವರ ಪತ್ನಿ ಯೂಲಿಯಾ ನವಾಲ್ನಿಯಗೆ ಕಳೆದ ವಾರ ಅವಕಾಶ ನೀಡಲಾಗಿತ್ತು.

‘‘ನಮ್ಮ ನಡುವೆ ಗಾಜಿನ ಪರದೆಯಿದ್ದು, ಟೆಲಿಫೋನ್ ಮೂಲಕ ನಾನು ನವಾಲ್ನಿಯೊಂದಿಗೆ ಮಾತನಾಡಿದೆ’’ ಎಂಬುದಾಗಿ ಪತ್ನಿ ಹೇಳಿದ್ದಾರೆ. ‘‘ಅವರು ಮಾತಾನಾಡಲು ಕಷ್ಟ ಪಡುತ್ತಿದ್ದರು. ಅವರು ಎಷ್ಟು ದುರ್ಬಲರಾಗಿದ್ದಾರೆಂದರೆ, ಸ್ವಲ್ಪ ಮಾತನಾಡಿದ ಬಳಿಕ ರಿಸೀವರನ್ನು ಕೆಳಗಿಟ್ಟು ಮಲಗಿದರು’’ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News