ಸತತ ಸೋಲಿನಿಂದ ಹೊರ ಬಂದ ಸನ್ ರೈಸರ್ಸ್ ಹೈದರಾಬಾದ್, ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಜಯ

Update: 2021-04-21 14:44 GMT

ಚೆನ್ನೈ: ಖಲೀಲ್ ಅಹ್ಮದ್ (3-21)ನೇತೃತ್ವದ ಬೌಲರ್ ಗಳ ಅತ್ಯುತ್ತಮ ಬೌಲಿಂಗ್ ಹಾಗೂ ಆರಂಭಿಕ ಬ್ಯಾಟ್ಸ್ ಮನ್ ಜಾನಿ ಬೈರ್ ಸ್ಟೋವ್ ಅರ್ಧಶತಕ(ಔಟಾಗದೆ 63, 56 ಎಸೆತ)ಕೊಡುಗೆಯ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧದ ಐಪಿಎಲ್ ನ 14ನೇ ಪಂದ್ಯದಲ್ಲಿ 9 ವಿಕೆಟ್ ಗಳ ಅಂತರದಿಂದ ಭರ್ಜರಿ ಜಯ ದಾಖಲಿಸಿದೆ.

ಈ ಗೆಲುವಿನೊಂದಿಗೆ ಸನ್ ರೈಸರ್ಸ್ ತಂಡ ಸತತ 3 ಪಂದ್ಯಗಳ ಸೋಲಿನಿಂದ ಹೊರಬಂದಿದೆ. ಮತ್ತೊಂದೆಡೆ ಪಂಜಾಬ್ ತಂಡ ಈ ಋತುವಿನ ಮೊದಲ ಪಂದ್ಯವನ್ನು ಗೆದ್ದ ಬಳಿಕ ಸತತ 3 ಪಂದ್ಯಗಳಲ್ಲಿ ಸೋಲುಂಡಿದೆ. ಅರ್ಧಶತಕ ಸಿಡಿಸಿದ ಬೈರ್ ಸ್ಟೋವ್ ಪಂದ್ಯಶ್ರೇಷ್ಠ ಗೌರವಕ್ಕೆ ಆಯ್ಕೆಯಾದರು.

ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಪಂಜಾಬ್ ಕಿಂಗ್ಸ್ 19.4 ಓವರ್ ಗಳಲ್ಲಿ 120 ರನ್ ಗಳಿಸುವಷ್ಟರಲ್ಲಿ ಆಲೌಟಾಗಿದೆ.

ಪಂಜಾಬ್ ಪರ ಮಯಾಂಕ್ ಅಗರ್ವಾಲ್ ಹಾಗೂ ಶಾರೂಖ್ ಖಾನ್ ತಲಾ 22 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು. ಕ್ರಿಸ್ ಗೇಲ್ 15, ಹೆನ್ರಿಕ್ಸ್ 14, ದೀಪಕ್ ಹೂಡಾ 13 ರನ್ ಗಳಿಸಲಷ್ಟೇ ಶಕ್ತರಾದರು.

ಬೌಲಿಂಗ್ ವಿಭಾಗದಲ್ಲಿ ಖಲೀಲ್ ಅಹ್ಮದ್ (3-21) ಹಾಗೂ ಅಭಿಷೇಕ್ ಶರ್ಮಾ(2-24) ಐದು ವಿಕೆಟ್ ಗಳನ್ನು ಹಂಚಿಕೊಂಡರು. ಪಂಜಾಬ್ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿದರು.

ಗೆಲ್ಲಲು 121 ರನ್ ಗುರಿ ಪಡೆದ ಹೈದರಾಬಾದ್ ತಂಡ 18.4 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿತು.

ಇನಿಂಗ್ಸ್ ಆರಂಭಿಸಿದ ನಾಯಕ ಡೇವಿಡ್ ವಾರ್ನರ್(37, 37 ಎಸೆತ)ಹಾಗೂ ಬೈರ್ ಸ್ಟೋವ್(ಔಟಾಗದೆ 63, 56 ಎಸೆತ, 3 ಬೌಂಡರಿ, 3 ಸಿಕ್ಸರ್)ಮೊದಲ ವಿಕೆಟ್ ಗೆ 73 ರನ್ ಸೇರಿಸಿ ಭದ್ರಬುನಾದಿ ಹಾಕಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News