×
Ad

ಐಪಿಎಲ್‌ನಿಂದ ಹೊರ ನಡೆದ ಆರ್.ಅಶ್ವಿನ್ : ಕಾರಣ ಏನು ಗೊತ್ತೇ?

Update: 2021-04-26 10:41 IST

ಹೊಸದಿಲ್ಲಿ : ಡೆಲ್ಲಿ ಕ್ಯಾಪಿಟಲ್ಸ್ ತಂಡದ ಟ್ರಂಪ್ ಕಾರ್ಡ್ ಎನಿಸಿದ ಖ್ಯಾತ ಸ್ಪಿನ್ನರ್ ಆರ್.ಅಶ್ವಿನ್, ಇಂದಿನಿಂದಲೇ 2021ನೇ ಸಾಲಿನ ಐಪಿಎಲ್‌ನಿಂದ ವಿರಮಿಸುವುದಾಗಿ ಪ್ರಕಟಿಸಿದ್ದಾರೆ.

"ನಾಳೆಯಿಂದ ನಾನು ಪ್ರಸಕ್ತ ಐಪಿಎಲ್‌ನಿಂದ ವಿರಮಿಸಲು ನಿರ್ಧರಿಸಿದ್ದೇನೆ. ನನ್ನ ಕುಟುಂಬ ಹಾಗೂ ಸಂಬಂಧಿಕರು ಕೋವಿಡ್-19 ವಿರುದ್ಧ ಹೋರಾಡುತ್ತಿದ್ದಾರೆ, ಈ ಸಂಕಷ್ಟದ ಸಮಯದಲ್ಲಿ ನಾನು ಅವರನ್ನು ಬೆಂಬಲಿಸಬೇಕಾಗಿದೆ" ಎಂದು ಅಶ್ವಿನ್ ಟ್ವೀಟ್ ಮಾಡಿದ್ದಾರೆ.

ಮುಂದಿನ ವಾರಗಳಲ್ಲಿ ದೇಶದಲ್ಲಿ ಕೋವಿಡ್-19 ಸ್ಥಿತಿ ಸುಧಾರಿಸಿದರೆ ಈ ಖ್ಯಾತ ಆಫ್‌ಸ್ಪಿನ್ನರ್ ಐಪಿಎಲ್‌ಗೆ ವಾಪಸ್ಸಾಗುವ ಸಾಧ್ಯತೆ ಇದೆ. "ಎಲ್ಲವೂ ಸರಿದಾರಿಗೆ ಮರಳಿದರೆ ನಾನು ಆಟಕ್ಕೆ ಮರಳುವ ಸಾಧ್ಯತೆ ಇದೆ. ಥ್ಯಾಂಕ್ಯೂ ಡೆಲ್ಲಿ ಕ್ಯಾಪಿಟಲ್ಸ್" ಎಂದು ಟ್ವೀಟ್ ಮಾಡಿದ್ದಾರೆ. ಅಶ್ವಿನ್ ಅವರ ನಿರ್ಧಾರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಡೆಲ್ಲಿ ಕ್ಯಾಪಿಟಲ್ಸ್, ಅವರಿಗೆ ಹಾಗೂ ಕುಟುಂಬಕ್ಕೆ ಸಂಪೂರ್ಣ ನೆರವು ನೀಡುವ ಭರವಸೆ ನೀಡಿದೆ.

"ಈ ಸಂಕಷ್ಟದ ಸಮಯದಲ್ಲಿ ನಿಮಗೆ ನಮ್ಮ ಸಂಪೂರ್ಣ ಬೆಂಬಲವಿದೆ. ನಮ್ಮ ಎಲ್ಲ ಶಕ್ತಿಯನ್ನು ಮತ್ತು ನಮ್ಮ ಎಲ್ಲ ಆಟಗಾರರ ಶಕ್ತಿಯನ್ನು ನಿಮ್ಮ ಹಾಗೂ ಕುಟುಂಬಕ್ಕೆ ಧಾರೆ ಎರೆಯುತ್ತಿದ್ದೇವೆ" ಎಂದು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಟ್ವೀಟ್ ಮಾಡಿದೆ. ಮಾಜಿ ಕ್ರಿಕೆಟಿಗರಾದ ಇರ್ಫಾನ್ ಪಠಾಣ್ ಮತ್ತು ಪ್ರಜ್ಞಾನ್ ಓಜಾ ಕೂಡಾ ಅಶ್ವಿನ್‌ಗೆ ಶುಭ ಹಾರೈಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News