ಭಾರತದಲ್ಲಿ ನಡೆಯಬೇಕಾಗಿರುವ ಟ್ವೆಂಟಿ-20 ವಿಶ್ವಕಪ್ ಯುಎಇಗೆ ಸ್ಥಳಾಂತರ?

Update: 2021-05-04 13:53 GMT

ಹೊಸದಿಲ್ಲಿ: ಈ ವರ್ಷದ ಟ್ವೆಂಟಿ-20  ವಿಶ್ವಕಪ್ ಟೂರ್ನಿಯನ್ನು ಭಾರತದಿಂದ ಯುಎಇಗೆ ಸ್ಥಳಾಂತರಿಸಲು ಸಿದ್ಧತೆ ನಡೆಸಲಾಗುತ್ತಿದೆ. ವಿಶ್ವಕಪ್ ನಡೆಯುವ ನವೆಂಬರ್ ನಲ್ಲಿ ಭಾರತದಲ್ಲಿ ಕೊರೋನದ ಮೂರನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆ ಇರುವ ಕಾರಣ  ಟೂರ್ನಿಯಲ್ಲಿ ಭಾಗವಹಿಸುವ ಯಾವುದೇ ತಂಡಗಳಿಗೆ ಭಾರತಕ್ಕೆ ಬರುವುದು "ಆರಾಮದಾಯಕ" ಆಗುವುದಿಲ್ಲ ಎಂದು ಬಿಸಿಸಿಐ ಒಪ್ಪಿಕೊಂಡಿದೆ.

ಒಂದು ತಿಂಗಳ ಅವಧಿಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ಬಯೋ-ಬಬಲ್ ನಲ್ಲಿ ಹಲವು ಕೋವಿಡ್-19 ಪ್ರಕರಣಗಳು ವರದಿಯಾದ ಬಳಿಕ ಪ್ರಸಕ್ತ ಐಪಿಎಲ್ ಟೂರ್ನಿಯನ್ನು ಮುಂದೂಡಲಾಗಿದ್ದು, ಹೀಗಾಗಿ ಈ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ 16 ತಂಡಗಳ ಪಂದ್ಯಾವಳಿಯನ್ನು ನಡೆಸುವ ಬಗ್ಗೆ ಭಾರತೀಯ ಕ್ರಿಕೆಟ್ ಮಂಡಳಿಯು ಗೊಂದಲದಲ್ಲಿದೆ ಎನ್ನಲಾಗಿದೆ.

ಬಿಸಿಸಿಐ ಅಧಿಕಾರಿಗಳು ಇತ್ತೀಚೆಗೆ ಕೇಂದ್ರ ಸರಕಾರದ ಕೆಲವು ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

"ಐಪಿಎಲ್ ಟೂರ್ನಿಯನ್ನು ಮುಂದೂಡಿರುವುದು ಕಳೆದ 70 ವರ್ಷಗಳಲ್ಲಿ ಮೊದಲ ಬಾರಿ ದೇಶವು ಕೆಟ್ಟ ಆರೋಗ್ಯ ಬಿಕ್ಕಟ್ಟಿನ ವಿರುದ್ಧ ಹೋರಾಡುತ್ತಿರುವಾಗ ಅಕ್ಟೋಬರ್-ನವೆಂಬರ್ ನಲ್ಲಿ ಜಾಗತಿಕ ಮಟ್ಟದ ಟೂರ್ನಿಯ ಆತಿಥ್ಯ ವಹಿಸುವುದು ನಿಜವಾಗಿಯೂ ಸುರಕ್ಷಿತವಲ್ಲ ಎಂಬ ಸೂಚಕವಾಗಿದೆ" ಎಂದು ಹಿರಿಯ ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಗ್ಯ ತಜ್ಞರು ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ ಕೊರೋನದ ಮೂರನೇ ಅಲೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ, ಇದನ್ನು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೊಪೆ ಹಂಚಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News