ಬ್ರಿಟನ್‌ನಲ್ಲಿ ಸೆರಂನಿಂದ 300 ಮಿ.ಡಾಲರ್ ಹೂಡಿಕೆ:ಕೋವಿಶೀಲ್ಡ್ ಉತ್ಪಾದಕ ಸಂಸ್ಥೆಯಿಂದ ವಿದೇಶದಲ್ಲಿಯೂ ಲಸಿಕೆ ಉತ್ಪಾದನೆ

Update: 2021-05-04 17:28 GMT
photo: twitter (@BorisJohnson)(@adarpoonawalla)

ಲಂಡನ್, ಮೇ 4: ಭಾರತದ ಖ್ಯಾತ ಲಸಿಕೆ ತಯಾರಕ ಸಂಸ್ಥೆ ಸೆರಂ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ ಬ್ರಿಟನ್‌ನಲ್ಲಿ 240 ದಶಲಕ್ಷ ಪೌಂಡ್ ಮೊತ್ತದ ಬೃಹತ್ ಹೂಡಿಕೆಯನ್ನು ಮಾಡಲಿದೆಯೆಂದು ಬ್ರಿಟಿಶ್ ಪ್ರಧಾನಿ ಬೋರಿಸ್ ಜಾನ್ಸನ್ ಮಂಗಳವಾರ ತಿಳಿಸಿದ್ದಾರೆ. ಸೆರಂ ಇನ್‌ಸ್ಟಿಟ್ಯೂಟ್ ಬ್ರಿಟನ್‌ನಲ್ಲಿ ಲಸಿಕೆಗಳನ್ನು ಕೂಡಾ ಉತ್ಪಾದಿಸುವಂತಹ ಘಟಕಗಳ ಸ್ಥಾಪನೆಗೆ ಹೂಡಿಕೆ ಮಾಡಲಿದೆಯೆಂದು ಅವರು ಹೇಳಿದ್ದಾರೆ.

ಭಾರತದಲ್ಲಿ ಕೋವಿಶೀಲ್ಡ್ ಲಸಿಕೆಗಳ ಪೂರೈಕೆಯಲ್ಲಿ ಕೊರತೆಯುಂಟಾಗಿರುವ ನಡುವೆಯೇ ಸೆರಂ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಧಾರ್‌ಪೂನಾವಾಲಾ ಕಳೆದ ವಾರ ದಿಢೀರ್ ಬ್ರಿಟನ್‌ಗೆ ಪ್ರಯಾಣಿಸಿದ್ದುದು ಭಾರೀ ಕುತೂಹಲ ಕೆರಳಿಸಿತ್ತು.

ಸೆರಂನ ಈ ಬೃಹತ್ ಯೋಜನೆಯು ಮಾರಾಟ ಕಚೇರಿ, ಕ್ಲಿನಿಕಲ್ ಟ್ರಯಲ್, ಸಂಶೋಧನೆ ಹಾಗೂ ಅಭಿವೃದ್ಧಿ ಮತ್ತು ಸಂಭಾವ್ಯ ಲಸಿಕೆಗಳ ತಯಾರಿಕಾ ಘಟಕಗಳನ್ನು ಒಳಗೊಂಡಿದೆಯೆಂದು ಅವರು ಹೇಳಿದ್ದಾರೆ. ಸೆರಂ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ ಜಗತ್ತಿನ ಅತಿ ದೊಡ್ಡ ಲಸಿಕೆ ಉತ್ಪಾದಕ ಸಂಸ್ಥೆಯಾಗಿದೆ. ಅಸ್ಟ್ರಾಝೆನೆಕಾದ ಸಹಯೋಗದೊಂದಿಗೆ ಮಿತಬೆಲೆಯ ಕೋವಿಶೀಲ್ಡ್ ಲಸಿಕೆಗಳನ್ನು ಉತ್ಪಾದಿಸುವ ಮೂಲಕ ಸೆರಂ ಜಾಗತಿಕ ಮಟ್ಟದಲ್ಲಿ ಗಮನಸೆಳೆಯುತ್ತಿದೆ.

ಸೆರಂ ಸಂಸ್ಥೆಯು ತಾನು ಅಭಿವೃದ್ದಿಪಡಿಸಿರುವಂತಹ ಮೂಗಿನ ಮೂಲಕ ಒಂದೇ ಡೋಸ್‌ನಲ್ಲಿ ನೀಡುವ ಕೊರೋನ ವೈರಸ್ ನಿರೋಧಕ ಲಸಿಕೆಯ ಮೊದಲನೆ ಹಂತದ ಕ್ಲಿನಿಕಲ್ ಟ್ರಯಲ್ ಪರೀಕ್ಷೆಗಳನ್ನು ಬ್ರಿಟನ್‌ನಲ್ಲಿ ನಡೆಸುತ್ತಿದೆ. ಸೆರಂ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ ಈ ಯೋಜನೆಯು ಭಾರತ ಹಾಗೂ ಬ್ರಿಟನ್ ನಡುವೆ ಏರ್ಪಟ್ಟಿರುವ ವಾಣಿಜ್ಯ ಹಾಗೂ ಹೂಡಿಕೆ ಒಪ್ಪಂದಗಳ ಒಂದು ಭಾಗವಾಗಿದೆ. ಇದರಿಂದಾಗಿ ಬ್ರಿಟನ್‌ನಲ್ಲಿ 6500 ಉದ್ಯೋಗಗಳು ಸೃಷ್ಟಿಯಾಗಲಿವೆ. ಸೆರಂ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ ಪ್ರತಿ ತಿಂಗಳು 60-70 ದಶಲಕ್ಷ ಅಸ್ಟ್ರಾಝೆನೆಕಾ ಲಸಿಕೆಗಳನ್ನು ಉತ್ಪಾದಿಸುತ್ತಿದ್ದು ಜುಲೈ ವೇಳೆಗೆ ಅದನ್ನು 100 ದಶಲಕ್ಷಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News