ಶ್ರೀಲಂಕಾ ವಿರುದ್ಧ ಸರಣಿಯಲ್ಲಿ ಭಾರತಕ್ಕೆ ಶಿಖರ್ ಧವನ್ ಸಾರಥ್ಯ?

Update: 2021-05-12 06:45 GMT

ಹೊಸದಿಲ್ಲಿ: ಜುಲೈನಲ್ಲಿ ನಿಗದಿಯಾಗಿರುವ ಶ್ರೀಲಂಕಾ ಕ್ರಿಕೆಟ್ ಪ್ರವಾಸದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಭಾರತದ ಏಕದಿನ ಕ್ರಿಕೆಟ್ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ. ಏಕೆಂದರೆ ಆ ಸಮಯದಲ್ಲಿ ಭಾರತದ ಪ್ರಮುಖ ಆಟಗಾರರು ಟೆಸ್ಟ್ ಪಂದ್ಯಗಳನ್ನಾಡಲು ಇಂಗ್ಲೆಂಡ್‌ನಲ್ಲಿರುತ್ತಾರೆ.

ಸೀಮಿತ ಓವರ್ ಕ್ರಿಕೆಟ್ ತಂಡದಲ್ಲಿ ಭುವನೇಶ್ವರ ಕುಮಾರ್, ಪೃಥ್ವಿ ಶಾ, ಹಾರ್ದಿಕ್ ಪಾಂಡ್ಯ ಹಾಗೂ ಇಶಾನ್ ಕಿಶನ್ ಸ್ಥಾನ ಪಡೆಯುವ ನಿರೀಕ್ಷೆಯಿದೆ. ಜುಲೈ 13ರಿಂದ ದ್ವೀಪರಾಷ್ಟ್ರದ ಒಂದೇ ಸ್ಥಳದಲ್ಲಿ ಮೂರು ಏಕದಿನ ಹಾಗೂ ಮೂರು ಟಿ-20 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಡುವ ಸಾಧ್ಯತೆಯಿದೆ.

ಕ್ರಿಕೆಟ್ ಪ್ರವಾಸದ ಯೋಜನೆಗಳನ್ನು ಇನ್ನೂ ಪ್ರಕಟಿಸಿಲ್ಲ. ಯಾವುದೇ ಅಧಿಕೃತ ಘೋಷಣೆ ಬಂದಿಲ್ಲವಾದರೂ, ಭಾರತದ ಪರ ಹಾಗೂ ಐಪಿಎಲ್‌ನಲ್ಲಿ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಕೆಲವು ಆಟಗಾರರು, ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಸ್ವದೇಶದಲ್ಲಿ ಸೀಮಿತ ಓವರ್ ಸರಣಿಯಲ್ಲಿ ಆಯ್ಕೆಯಾದವರು ಕೂಡ ತಂಡದಲ್ಲಿ ಆಯ್ಕೆಯಾಗಬಹುದು. ಐಪಿಎಲ್ ಮೂಲಕ ಬೆಳಕಿಗೆ ಬಂದ ಯುವಕರಾದ, ಸ್ಪಿನ್ನರ್ ರಾಹುಲ್ ಚಹಾರ್ ಹಾಗೂ ಎಡಗೈ ವೇಗದ ಬೌಲರ್ ಚೇತನ್ ಸಕಾರಿಯಾ ಅವರು ಭಾರತ ತಂಡದಲ್ಲಿ ಸ್ಥಾನ ಪಡೆಯಬಹುದು. ರಾಹುಲ್ ಅವರ ಸೋದರಸಂಬಂಧಿ ದೀಪಕ್ ಚಹಾರ್ ಕೂಡ ಸ್ಥಾನ ಪಡೆಯಬಹುದಾಗಿದೆ.

 ಈ ಬಾರಿ ಐಪಿಎಲ್ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಪರ ಏಳು ಪಂದ್ಯಗಳಲ್ಲಿ ಏಳು ವಿಕೆಟ್ ಕಬಳಿಸಿರುವ ಸಕಾರಿಯಾ ಗಮನ ಸೆಳೆದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಆಟಗಾರ, ಕರ್ನಾಟಕದ ಓಪನರ್ ದೇವದತ್ ಪಡಿಕ್ಕಲ್ ಅವರು ಧವನ್ ಮತ್ತು ಶಾ ಅವರೊಂದಿಗೆ ಲಂಕಾಕ್ಕೆ ಪ್ರಯಾಣಿಸಲಿರುವ ಭಾರತದ ಮೂರು ಆರಂಭಿಕ ಆಟಗಾರರಲ್ಲಿ ಒಬ್ಬರಾಗುವ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News