ಕೋವಿಡ್ ಸೋಂಕಿನ ಬಳಿಕ ರಕ್ತದಲ್ಲಿ ಪ್ರತಿಕಾಯಗಳು 8 ತಿಂಗಳು ಜೀವಂತ: ಅಧ್ಯಯನ ವರದಿ

Update: 2021-05-12 18:19 GMT

ರೋಮ್ (ಇಟಲಿ), ಮೇ 12: ಒಮ್ಮೆ ಕೋವಿಡ್-19 ಸಾಂಕ್ರಾಮಿಕದ ಸೋಂಕಿಗೆ ಒಳಗಾದ ವ್ಯಕ್ತಿಯ ರಕ್ತದಲ್ಲಿ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಹುಟ್ಟಿಕೊಂಡಿರುವ ಪ್ರತಿಕಾಯಗಳು ಕನಿಷ್ಠ 8 ತಿಂಗಳುಗಳ ಕಾಲ ಇರುತ್ತವೆ ಎಂದು ಇಟಲಿಯ ಸಂಶೋಧಕರು ಮಂಗಳವಾರ ಹೇಳಿದ್ದಾರೆ.

ಸಾಂಕ್ರಾಮಿಕದ ತೀವ್ರತೆ, ರೋಗಿಗಳ ಪ್ರಾಯ ಅಥವಾ ಇತರ ರೋಗಗಳ ಉಪಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳದೆ, ಪ್ರತಿಕಾಯಗಳು ಇಷ್ಟು ಕಾಲ ರೋಗಿಯ ದೇಹದಲ್ಲಿ ಇರುತ್ತವೆ ಎಂದು ಮಿಲಾನ್ ನಗರದ ಸಾನ್ ರಫೇಲ್ ಆಸ್ಪತ್ರೆ ನೀಡಿರುವ ಹೇಳಿಕೆಯೊಂದು ತಿಳಿಸಿದೆ.
ರೋಗ ಪತ್ತೆಯಾದ ಬಳಿಕ 8 ತಿಂಗಳವರೆಗೆ ರಕ್ತದಲ್ಲಿ ಕೊರೋನ ವೈರಸ್ ವಿರುದ್ಧ ಹೋರಾಡುವ ಪ್ರತಿಕಾಯಗಳ ಉಪಸ್ಥಿತಿ ಸಮೃದ್ಧವಾಗಿಯೇ ಇರುತ್ತವೆ. ಅಧ್ಯಯನಕ್ಕೆ ಗುರಿಪಡಿಸಲಾದ 162 ಮಂದಿಯ ಪೈಕಿ ಮೂವರಲ್ಲಷ್ಟೇ ಪ್ರತಿಕಾಯಗಳು ಇರಲಿಲ್ಲ ಎಂದು ಅದು ಹೇಳಿದೆ.

ಕೊರೋನ ವೈರಸ್ನಿಂದ ಚೇತರಿಸಿಕೊಳ್ಳಲು ಪ್ರತಿಕಾಯಗಳು ಸೃಷ್ಟಿಯಾಗುವುದು ಅಗತ್ಯ ಎಂದು ನೇಚರ್ ಕಮ್ಯುನಿಕೇಶನ್ಸ್ ಎಂಬ ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ಅಧ್ಯಯನ ತಿಳಿಸಿದೆ.

ಸೋಂಕಿಗೊಳಗಾದ 15 ದಿನಗಳಲ್ಲಿ ಪ್ರತಿಕಾಯಗಳು ಉತ್ಪತ್ತಿಯಾಗದಿದ್ದರೆ, ಅಂಥ ವ್ಯಕ್ತಿಗಳು ಗಂಭೀರ ಸಮಸ್ಯೆಗಳಿಗೆ ಒಳಗಾಗುತ್ತಾರೆ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News