ಸ್ವಯಂ ಸೇವಕ ತಂಡ ಕಟ್ಟಿಕೊಂಡು ಕೋವಿಡ್ ಪೀಡಿತರಿಗೆ ಕ್ರಿಕೆಟಿಗ ಹನುಮ ವಿಹಾರಿ ನೆರವು

Update: 2021-05-14 12:32 GMT

ಹೈದರಾಬಾದ್: ದೇಶದಿಂದ ದೂರವಿದ್ದರೂ  ಟೆಸ್ಟ್ ಬ್ಯಾಟ್ಸ್‌ಮನ್ ಹನುಮ ವಿಹಾರಿ ಅವರು ಕೊರೋನವೈರಸ್ ವಿರುದ್ಧದ ಭಾರತದ ಹೋರಾಟಕ್ಕೆ ಕೊಡುಗೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ, ಕೋವಿಡ್ -19 ರೋಗಿಗಳಿಗೆ ಆಸ್ಪತ್ರೆಯ ಹಾಸಿಗೆಗಳು ಹಾಗೂ ಆಮ್ಲಜನಕದ ಸಿಲಿಂಡರ್‌ಗಳನ್ನು ವ್ಯವಸ್ಥೆ ಮಾಡಿ  ಜನರಿಗೆ ಸಹಾಯ ಮಾಡಿದ್ದಾರೆ.

"ನಾನು ನನ್ನನ್ನು ವೈಭವೀಕರಿಸಲು ಬಯಸುವುದಿಲ್ಲ. ಈ ಕಷ್ಟದ ಸಮಯದಲ್ಲಿ ಸಾಧ್ಯವಿರುವ ಎಲ್ಲ ಸಹಾಯದ ಅಗತ್ಯವಿರುವ ತಳಮಟ್ಟದ ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ನಾನು ಇದನ್ನು ಮಾಡುತ್ತಿದ್ದೇನೆ. ಇದು ಕೇವಲ ಆರಂಭವಾಗಿದೆ" ಎಂದು ವಿಹಾರಿ ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದರು .

ಕೋವಿಡ್-19 ರೋಗಿಗಳು ಹಾಗೂ  ಅವರ ಕುಟುಂಬಗಳು ಪ್ರತಿದಿನ ಎದುರಿಸುತ್ತಿರುವ ಸಮಸ್ಯೆಗಳಿಂದ ಎಲ್ಲ ಭಾರತೀಯರಂತ ವಿಹಾರಿ ಕೂಡ ಆಘಾತಕ್ಕೊಳಗಾಗಿದ್ದಾರೆ. ಆಸ್ಪತ್ರೆಯ ಹಾಸಿಗೆಗಳು, ಆಮ್ಲಜನಕ ಸರಬರಾಜು ಹಾಗೂ  ಅಗತ್ಯ ಔಷಧಿಗಳಂತಹ ಮೂಲಭೂತ ಅವಶ್ಯಕತೆಯನ್ನು ಪೂರೈಸಿಕೊಳ್ಳುವುದು ತ್ರಾಸದಾಯಕವಾಗಿದೆ.

“ಕೊರೋನದ ಎರಡನೆಯ ಅಲೆಯು  ತುಂಬಾ ಪ್ರಬಲವಾಗಿದ್ದರಿಂದ, ಆಸ್ಪತ್ರೆಯ ಹಾಸಿಗೆಯನ್ನು ಪಡೆಯುವುದು ಕಷ್ಟಕರವಾಯಿತು ಹಾಗೂ  ಅದು ಯೋಚಿಸಲಾಗದ ಸಂಗತಿಯಾಗಿದೆ. ಆದ್ದರಿಂದ, ನನ್ನ ಫಾಲೋವರ್ಸ್ ಗಳನ್ನು ನನ್ನ ಸ್ವಯಂಸೇವಕರಾಗಿ ಬಳಸಲು ಹಾಗೂ  ನನಗೆ ಸಾಧ್ಯವಾದಷ್ಟು ಜನರಿಗೆ ಸಹಾಯ ಮಾಡಲು ನಾನು ನಿರ್ಧರಿಸಿದ್ದೇನೆ "ಎಂದು 110,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ವಿಹಾರಿ ಹೇಳಿದರು.

"ಪ್ಲಾಸ್ಮಾ, ಹಾಸಿಗೆಗಳು ಮತ್ತು ಅಗತ್ಯ ಔಷಧಿಗಳನ್ನು ಪಡೆಯಲು ಅಥವಾ ವ್ಯವಸ್ಥೆ ಮಾಡಲು ಸಾಧ್ಯವಾಗದ ಜನರನ್ನು ತಲುಪುವುದು ನನ್ನ ಗುರಿಯಾಗಿದೆ. ಆದರೆ ಇದು ಸಾಕಾಗುವುದಿಲ್ಲ. ಭವಿಷ್ಯದಲ್ಲಿ ಹೆಚ್ಚಿನ ಸೇವೆ ಮಾಡಲು ನಾನು ಬಯಸುತ್ತೇನೆ" ಎಂದು ವಿಹಾರಿ ಹೇಳಿದರು.

ನಾನು ಸ್ವಯಂಸೇವಕರಾಗಿ ವಾಟ್ಸಾಪ್ ಗುಂಪಿನಲ್ಲಿ ಸುಮಾರು 100 ಜನರನ್ನು ಹೊಂದಿದ್ದೇನೆ ಹಾಗೂ  ಅವರ ಕಠಿಣ ಪರಿಶ್ರಮದಿಂದ ನಾವು ಕೆಲವು ಜನರಿಗೆ ಸಹಾಯ ಮಾಡಲು ಸಾಧ್ಯವಾಯಿತು. ಹೌದು, ನಾನು ಕ್ರಿಕೆಟಿಗ, ಚಿರಪರಿಚಿತ, ಆದರೆ ತೊಂದರೆಗೀಡಾದವರನ್ನು ತಲುಪಲು ಸ್ವಯಂ ಸೇವಕರ ಸತತ ಪ್ರಯತ್ನದಿಂದಾಗಿ ನಾನು ಸಹಾಯ ಮಾಡಲು ಸಮರ್ಥನಾಗಿದ್ದೇನೆ "ಎಂದು ವಿಹಾರಿ ಹೇಳಿದರು.

"ನನ್ನ ಪತ್ನಿ, ಸಹೋದರಿ ಹಾಗೂ ನನ್ನ ಕೆಲವು ಆಂಧ್ರ ಕ್ರಿಕೆಟ್ ತಂಡದ ಸಹ ಆಟಗಾರರು ಕೂಡ ನನ್ನ ಸ್ವಯಂಸೇವಕ ತಂಡದ ಭಾಗವಾಗಿದ್ದಾರೆ. ಅವರ ಬೆಂಬಲವನ್ನು ನೋಡಿದಾಗ ಹೃದಯ ತುಂಬಿ ಬರುತ್ತದೆ" ಎಂದು ವಿಹಾರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News