×
Ad

ಅಂಟಾರ್ಕ್ಟಿಕ: ಜಗತ್ತಿನ ಅತಿ ದೊಡ್ಡ ಹಿಮಪರ್ವತ ಕುಸಿತ, ಏರುತ್ತಿರುವ ಸಮುದ್ರ ಮಟ್ಟ

Update: 2021-05-20 23:01 IST
photo : twitter.com

ಪ್ಯಾರಿಸ್ (ಫ್ರಾನ್ಸ್), ಮೇ 20: ಅಂಟಾರ್ಕ್ಟಿಕ ಖಂಡದಲ್ಲಿರುವ ರಾನ್ ಐಸ್ ಶೆಲ್ಫ್ನಿಂದ ಬೃಹತ್ ಹಿಮಪರ್ವತ (ಐಸ್ಬರ್ಗ್)ವೊಂದು ಕಳಚಿ ಬಿದ್ದಿದೆ ಎಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಬುಧವಾರ ಹೇಳಿದೆ. ಎ-76 ಎಂಬ ಹೆಸರನ್ನು ಹೊಂದಿದ್ದ ಆ ಹಿಮಗುಡ್ಡೆಯು ಸುಮಾರು 4,320 ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿದ್ದು, ಜಗತ್ತಿನ ಅತಿ ದೊಡ್ಡ ಹಿಮಪರ್ವತವಾಗಿತ್ತು.

ವೆಡೆಲ್ ಸಮುದ್ರದಲ್ಲಿರುವ ಈ ಹಿಮಪರ್ವತವು ಸುಮಾರು 170 ಕಿ.ಮೀ. ಉದ್ದ ಮತ್ತು 25 ಕಿ.ಮೀ. ಅಗಲವಾಗಿದೆ. ಅದು ಸ್ಪೇನ್ನ ಮಜೋರ್ಕ ದ್ವೀಪಕ್ಕಿಂತ ದೊಡ್ಡದಾಗಿದೆ. ಸ್ಪೇನ್ನ ಬೇಲಿಯಾರಿಕ್ ದ್ವೀಪಗಳ ಪೈಕಿ ಒಂದಾಗಿರುವ ಮಜೋರ್ಕ 3,640 ಚದರ ಕಿ.ಮೀ. ವಿಸ್ತೀರ್ಣವನ್ನು ಹೊಂದಿದೆ ಎಂದು ರಾಯ್ಟರ್ಸ್‌ ವರದಿ ಮಾಡಿದೆ.

ಈ ಹಿಮಪರ್ವತವನ್ನು ಬ್ರಿಟಿಶ್ ಅಂಟಾರ್ಕ್ಟಿಕ್ ಸರ್ವೇಯ ಕೀತ್ ಮ್ಯಾಕಿನ್ಸನ್ ಪತೆಹಚ್ಚಿದ್ದಾರೆ ಹಾಗೂ ಅಮೆರಿಕದ ನ್ಯಾಶನಲ್ ಐಸ್ ಸೆಂಟರ್, ಅಮೆರಿಕದ ಬಾಹ್ಯಾಕಾಶ ಕಾರ್ಯಕ್ರಮ ಸೆಂಟಿನೆಲ್-1ರಿಂದ ಪಡೆದ ಚಿತ್ರಗಳನ್ನು ಬಳಸಿಕೊಂಡು ಖಚಿತಪಡಿಸಿದೆ.
ವೆಡೆಲ್ ಸಮುದ್ರದಲ್ಲಿದ್ದ ಎ-23ಎ ಹಿಮಪರ್ವತಕ್ಕಿಂತ ಎ-76 ಹಿಮಪರ್ವತ ದೊಡ್ಡದಾಗಿದೆ ಎಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಹೇಳಿದೆ. ಎ-23ಎ 1,270 ಚದರ ಕಿ.ಮೀ. ವಿಸ್ತೀರ್ಣ ಹೊಂದಿತ್ತು.

ಎ-23ಎ ಕಳೆದ ವರ್ಷ ಅಂಟಾರ್ಕ್ಟಿಕದಿಂದ ಕುಸಿದಿತ್ತು. ಅಂಟಾರ್ಕ್ಟಿಕದ ಹಿಮರಾಶಿಯು ಜಗತ್ತಿನ ಇತರ ಭಾಗಗಳ ಹಿಮಕ್ಕಿಂತ ವೇಗವಾಗಿ ಬಿಸಿಯಾಗುತ್ತಿದೆ. ಹಾಗಾಗಿ, ಹಿಮವು ದಿನೇ ದಿನೇ ಕರಗುತ್ತಿದ್ದು, ವಿಶೇಷವಾಗಿ ವೆಡೆಲ್ ಸಮುದ್ರದಲ್ಲಿ ಹಿಮನದಿಗಳು ಮರೆಯಾಗುತ್ತಿವೆ. ಇದರ ಪರಿಣಾಮವಾಗಿ ಪ್ರತಿ ವರ್ಷ ಸಮುದ್ರದ ಮಟ್ಟ ನಿರಂತರವಾಗಿ ಏರುತ್ತಿದೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News