ಎರಡು ದೇಶದ ಪರ ಆಡಿರುವ ರಾಂಕಿನ್ ಅಂತರ್ ರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ

Update: 2021-05-22 11:57 GMT

ಹೊಸದಿಲ್ಲಿ, ಮೇ 21: ಇಂಗ್ಲೆಂಡ್ ಹಾಗೂ  ಐರ್ಲೆಂಡ್  ತಂಡದ ವೇಗದ ಬೌಲರ್  ಬೋಯ್ಡ್ ರಾಂಕಿನ್ ಎರಡು ದೇಶಗಳ ಪರ ಮೂರು ಮಾದರಿಯ ಕ್ರಿಕೆಟ್ ನಲ್ಲಿ ಆಡಿರುವ  ಏಕೈಕ ಕ್ರಿಕೆಟಿಗನಾಗಿದ್ದು,  ಇದೀಗ  ಅಂತರ್ ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ.

ರಾಂಕಿನ್ 2003 ರಲ್ಲಿ ಐರ್ಲೆಂಡ್‌  ಪರ ಪಾದಾರ್ಪಣೆ  ಪಂದ್ಯ ಆಡಿದ್ದರು. 2020 ರಲ್ಲಿ ಗ್ರೇಟರ್ ನೋಯ್ಡಾದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಟ್ವೆಂಟಿ-20   ಪಂದ್ಯದಲ್ಲಿ ಕೊನೆಯ ಬಾರಿ ಆಡಿದರು.

36 ರ ಹರೆಯದ ರಾಂಕಿನ್  2013-14 ಪ್ರವಾಸದಲ್ಲಿ ಇಂಗ್ಲೆಂಡ್ ಪರ ಏಳು ಏಕದಿನ ಹಾಗೂ  ಎರಡು ಟಿ 20  ಪಂದ್ಯಗಳ ಜೊತೆಗೆ ಆ್ಯಶಸ್ ಟೆಸ್ಟ್  ಪಂದ್ಯವನ್ನು ಆಡಿದ್ದರು.

2017 ರಲ್ಲಿ ಟೆಸ್ಟ್ ಸ್ಥಾನಮಾನ ಪಡೆದ ನಂತರ ಐರ್ಲೆಂಡ್ ಪರ ಆಡಲು ರಾಂಕಿನ್ ಅವರು ಹಿಂದಿರುಗಿದರು. ಒಟ್ಟಾರೆಯಾಗಿ ಅವರು ಮೂರು ಟೆಸ್ಟ್, 75 ಏಕದಿನ ಹಾಗೂ  50 ಟ್ವೆಂಟಿ-20  ಪಂದ್ಯಗಳನ್ನು ಆಡಿದ್ದಾರೆ.

"ಅಂತರ್ ರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗುವುದು ಯಾವಾಗಲೂ ಕಠಿಣ ನಿರ್ಧಾರ.  ಆದರೆ ಈಗ ನಿವೃತ್ತಿಯಾಗಲು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ . ನಾನು 2003 ರಿಂದ ವೃತ್ತಿಪರವಾಗಿ ಕ್ರಿಕೆಟ್ ಆಡಲು ನನ್ನ ಹೃದಯ ಹಾಗೂ  ಆತ್ಮವನ್ನು ಮೀಸರಿಸಿದ್ದೇನೆ ಹಾಗೂ  ಅದರ ಪ್ರತಿ ನಿಮಿಷವನ್ನೂ ಪ್ರೀತಿಸುತ್ತೇನೆ’’ ಎಂದು ರಾಂಕಿನ್ ಹೇಳಿದ್ದಾರೆ.

ಎರಡು ದೇಶಗಳ ಪರವಾಗಿ  ಟೆಸ್ಟ್ ಕ್ರಿಕೆಟ್ ಆಡಿದ 15 ಆಟಗಾರರಲ್ಲಿ ರಾಂಕಿನ್ ಕೂಡ  ಒಬ್ಬರಾಗಿದ್ದಾರೆ.

"ಕೌಂಟಿ ಕ್ರಿಕೆಟ್‌ನಲ್ಲಿ ಸುದೀರ್ಘ ವೃತ್ತಿಜೀವನವನ್ನು ಕಳೆದಿದ್ದು, ವಿಶೇಷವಾಗಿ ವಾರ್ವಿಕ್‌ಶೈರ್‌ನೊಂದಿಗಿನ ನನ್ನ 11 ವರ್ಷಗಳ ಅವಧಿಯಲ್ಲಿ ಕೌಂಟಿ ಚಾಂಪಿಯನ್‌ಶಿಪ್, 50 ಓವರ್‌ಗಳ ಸ್ಪರ್ಧಾವಳಿಯನ್ನು  ಎರಡು ಬಾರಿ ಗೆದ್ದಿದ್ದೇನೆ  ಹಾಗೂ  2014 ರಲ್ಲಿ ಟಿ 20 ಬ್ಲಾಸ್ಟ್ ಬಹಳ ವಿಶೇಷವಾಗಿದೆ ಹಾಗೂ  ನಾನು ಇದಕ್ಕೆ ತುಂಬಾ ಕೃತಜ್ಞನಾಗಿದ್ದೇನೆ" ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News