ಮಾಲಿ: ಕ್ಷಿಪ್ರಕ್ರಾಂತಿಯ ಬಳಿಕ ಅಧ್ಯಕ್ಷ, ಪ್ರಧಾನಿ ಬಿಡುಗಡೆ

Update: 2021-05-27 17:05 GMT
photo: twitter

ಬಮಾಕೊ (ಮಾಲಿ), ಮೇ 27: ಪಶ್ಚಿಮ ಆಫ್ರಿಕದ ದೇಶ ಮಾಲಿಯಲ್ಲಿ 9 ತಿಂಗಳ ಅಂತರದಲ್ಲಿ ನಡೆದ ಎರಡನೇ ಸೇನಾ ಕ್ಷಿಪ್ರಕ್ರಾಂತಿಯ ವೇಳೆ ಬಂಧಿಸಲ್ಪಟ್ಟಿದ್ದ ದೇಶದ ಮಧ್ಯಂತರ ಅಧ್ಯಕ್ಷ ಮತ್ತು ಪ್ರಧಾನಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಸೇನಾ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. ಮೂರು ದಿನಗಳ ಹಿಂದೆ ಅವರನ್ನು ಬಂಧಿಸಲಾಗಿದ್ದು, ಅವರ ಅಧಿಕಾರಗಳನ್ನು ಕಸಿದುಕೊಳ್ಳಲಾಗಿತ್ತು.

ಅವರ ಬಿಡುಗಡೆಯೊಂದಿಗೆ ಅಂತರ್ರಾಷ್ಟ್ರೀಯ ಸಮುದಾಯದ ಪ್ರಮುಖ ಬೇಡಿಕೆಯೊಂದು ಈಡೇರಿದೆ. ಆದರೆ, ತಕ್ಷಣ ನಾಗರಿಕ ಸರಕಾರವನ್ನು ಮರುಸ್ಥಾಪಿಸಬೇಕೆಂಬ ಬೇಡಿಕೆ ಸೇರಿದಂತೆ ಇತರ ಬೇಡಿಕೆಗಳು ಈಡೇರಿಲ್ಲ.

‘‘ಮಧ್ಯಂತರ ಅಧ್ಯಕ್ಷ ಮತ್ತು ಪ್ರಧಾನಿಯನ್ನು ಸ್ಥಳೀಯ ಸಮಯ ಗುರುವಾರ ಮುಂಜಾನೆ 1:30ಕ್ಕೆ ಬಿಡುಗಡೆ ಮಾಡಲಾಗಿದೆ. ನಾವು ನಮ್ಮ ಭರವಸೆಯನ್ನು ಈಡೇರಿಸಿದ್ದೇವೆ’’ ಎಂದು ಸೇನಾಧಿಕಾರಿಯು ಎಎಫ್ಪಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಾ ಹೇಳಿದರು.
‌ಅಧ್ಯಕ್ಷ ಬಹ್ ನಡವ್ ಮತ್ತು ಪ್ರಧಾನಿ ಮೋಕ್ಟರ್ ಅವೇನ್ರ ಬಿಡುಗಡೆಯನ್ನು ಅವರ ಕುಟುಂಬ ಸದಸ್ಯರು ಖಚಿತಪಡಿಸಿದ್ದಾರೆ.

ಅವರನ್ನು ಸೇನಾಧಿಕಾರಿಗಳು ಸೋಮವಾರ ಬಂಧಿಸಿದ್ದರು. ಸರಕಾರದ ಸಚಿವ ಸಂಪುಟ ಪುನರ್ರಚನೆಯಿಂದ ಕೆಲವು ಸೇನಾಧಿಕಾರಿಗಳು ಅಸಂತುಷ್ಟಗೊಂಡಿದ್ದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News