ಅತ್ಯಂತ ವೇಗವಾಗಿ ಮೌಂಟ್ ಎವರೆಸ್ಟ್ ಏರಿದ ಅತಿ ಹಿರಿಯ ಅಮೆರಿಕನ್ ಮಹಿಳೆ

Update: 2021-05-29 17:49 GMT
ಸಾಂದರ್ಭಿಕ ಚಿತ್ರ

ಕಠ್ಮಂಡು (ನೇಪಾಳ), ಮೇ 29: ಅಮೆರಿಕ ಮತ್ತು ಹಾಂಕಾಂಗ್ ನ  ಪರ್ವತಾರೋಹಿಗಳು ಈ ವಾರ ಮೌಂಟ್ ಎವರೆಸ್ಟ್ನಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸಿದ್ದಾರೆ. 75 ವರ್ಷದ ಆರ್ತರ್ ಮುಯಿರ್ ರವಿವಾರ 8,848.86 ಮೀಟರ್ ಎತ್ತರದ ಶಿಖರವನ್ನು ಏರಿದ್ದಾರೆ. ಇದರೊಂದಿಗೆ ಜಗತ್ತಿನ ಅತಿ ಎತ್ತರದ ಶಿಖರವನ್ನು ಏರಿದ ಅತ್ಯಂತ ಹಿರಿಯ ಅಮೆರಿಕನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಆರ್ತರ್ ಮುಯಿರ್, ಬಿಲ್ ಬರ್ಕ್ರ ದಾಖಲೆಯನ್ನು ಮುರಿದಿದ್ದಾರೆ. ಬಿಲ್ 2009ರಲ್ಲಿ 67 ವರ್ಷ ವಯಸ್ಸಿನಲ್ಲಿ ಮೌಂಟ್ ಎವರೆಸ್ಟ್ ಶಿಖರ ಏರಿದ ಅತಿ ಹಿರಿಯ ಅಮೆರಿಕನ್ ಆಗಿದ್ದರು.

ಅದೇ ವೇಳೆ, ಹಾಂಕಾಂಗ್ನ 45 ವರ್ಷದ ಟ್ಸಾಂಗ್ ಯಿನ್-ಹುಂಗ್ ಕೇವಲ 26 ಗಂಟೆಗಳಲ್ಲಿ ಆರೋಹಣವನ್ನು ಮುಕ್ತಾಯಗೊಳಿಸಿದ್ದಾರೆ. ಇದು ಮೂಲ ಶಿಬಿರದಿಂದ ಹೊರಟ ಬಳಿಕ ಶಿಖರವನ್ನು ಏರಲು ಮಹಿಳೆಯೊಬ್ಬರು ತೆಗೆದುಕೊಂಡಿರುವ ಅತ್ಯಂತ ಕಡಿಮೆ ಸಮಯವಾಗಿದೆ. ಸಾಮಾನ್ಯವಾಗಿ, ಆರೋಹಿಗಳು ಮೂಲ ಶಿಬಿರದಿಂದ ಹೊರಟ ಬಳಿಕ ಶಿಖರವನ್ನು ತಲುಪಲು ಹಲವು ದಿನಗಳನ್ನು ತೆಗೆದುಕೊಳ್ಳುತ್ತಾರೆ.

ಟ್ಸಾಂಗ್ ಕಳೆದ ವಾರದ ಶನಿವಾರ ಮಧ್ಯಾಹ್ನ 1:20ಕ್ಕೆ ಮೂಲ ಶಿಬಿರದಿಂದ ಹೊರಟು ಮಾರನೇ ದಿನ ಮಧ್ಯಾಹ್ನ 3:10ಕ್ಕೆ ಶಿಖರ ಏರಿದ್ದಾರೆ. ಇದರೊಂದಿಗೆ ಅವರು ನೇಪಾಳಿ ಮಹಿಳೆ ಫೂಂಜೊ ಝಾಂಗ್ಮು ಅವರ ದಾಖಲೆಯನ್ನು ಮುರಿದಿದ್ದಾರೆ. ಅವರು 2017ರಲ್ಲಿ 39 ಗಂಟೆ ಮತ್ತು 6 ನಿಮಿಷಗಳಲ್ಲಿ ಶಿಖರ ತಲುಪಿದ್ದರು.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News