×
Ad

ಚೋಕ್ಸಿಯನ್ನು ಆ್ಯಂಟಿಗ ನಾಗರಿಕನಂತೆ ನಡೆಸಿಕೊಳ್ಳಿ: ಪ್ರಧಾನಿ ಗ್ಯಾಸ್ಟನ್ ಬ್ರೌನ್ ಗೆ ಪ್ರತಿಪಕ್ಷ ಒತ್ತಾಯ

Update: 2021-05-29 23:32 IST

ಸೇಂಟ್ ಜೋನ್ಸ್ (ಆ್ಯಂಟಿಗ ಮತ್ತು ಬಾರ್ಬುಡ), ಮೇ 29: ಭಾರತೀಯ ಬ್ಯಾಂಕ್ಗಳಿಗೆ ಸುಮಾರು 14,000 ಕೋಟಿ ರೂಪಾಯಿ ವಂಚಿಸಿರುವ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ಆ್ಯಂಟಿಗ ಮತ್ತು ಬಾರ್ಬುಡ ಪ್ರಧಾನಿ ಗ್ಯಾಸ್ಟನ್ ಬ್ರೌನ್ ಆ್ಯಂಟಿಗ ದೇಶದ ಪ್ರಜೆಯಾಗಿ ಪರಿಗಣಿಸಬೇಕು ಎಂದು ದೇಶದ ಪ್ರತಿಪಕ್ಷಗಳ ಪೈಕಿ ಒಂದಾಗಿರುವ ಯುನೈಟೆಡ್ ಪ್ರೊಗ್ರೆಸಿವ್ ಪಾರ್ಟಿ (ಯುಪಿಪಿ) ಶನಿವಾರ ಹೇಳಿದೆ.

ಚೋಕ್ಸಿ ಆ್ಯಂಟಿಗ ಪ್ರಜೆಯಾಗಿರುವುದರಿಂದ ದೇಶದ ಕಾನೂನು ಪ್ರಕ್ರಿಯೆಗೆ ಒಳಪಡುತ್ತಾರೆ. ಹಾಗಾಗಿ, ಅವರನ್ನು ಕಾನೂನಿಗೆ ಅನುಗುಣವಾಗಿ ನಡೆಸಿಕೊಳ್ಳಬೇಕು ಎಂದು ಯುಪಿಪಿ ಹೇಳಿದೆ ಎಂದು ಆ್ಯಂಟಿಗ ನ್ಯೂಸ್ ರೂಮ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಚೋಕ್ಸಿಯನ್ನು ಭಾರತಕ್ಕೆ ನೇರವಾಗಿ ಕಳುಹಿಸಿ ಎಂಬುದಾಗಿ ಆ್ಯಂಟಿಗ ಮತ್ತು ಬಾರ್ಬುಡ ಪ್ರಧಾನಿ ಗ್ಯಾಸ್ಟನ್ ಬ್ರೌನ್ ಡೋಮಿನಿಕ ದೇಶಕ್ಕೆ ಸೂಚಿಸಿದ ಬಳಿಕ ಯುಪಿಪಿ ಈ ಹೇಳಿಕೆ ನೀಡಿದೆ.

2018ರಿಂದ ಆ್ಯಂಟಿಗದಲ್ಲಿರುವ ಚೋಕ್ಸಿ ಇತ್ತೀಚೆಗೆ ಅಲ್ಲಿಂದ ತಪ್ಪಿಸಿಕೊಂಡು ಕ್ಯೂಬಾಕ್ಕೆ ಹೋಗುವ ಪ್ರಯತ್ನದಲ್ಲಿ ನೆರೆಯ ಡೋಮಿನಿಕ ದೇಶದಲ್ಲಿ ಸಿಕ್ಕಿಬಿದ್ದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News