ಅರ್ನಬ್‌ ಗೋಸ್ವಾಮಿ ಗೈರಿನ ಮಧ್ಯೆ ರಿಪಬ್ಲಿಕ್‌ ಭಾರತ್‌ ಪ್ರಸಾರ ನಿಲ್ಲಿಸಿದ ಯುಕೆ?: ವರದಿ

Update: 2021-05-31 17:24 GMT

ರಿಪಬ್ಲಿಕ್‌ ಭಾರತ್‌ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿಯವರು ಒಂದು ತಿಂಗಳಿನಿಂದೀಚೆಗೆ ವಾಹಿನಿಯಲ್ಲಿ ಕಾಣಿಸಿಕೊಳ್ಳದಿರುವುದರ ಕುರಿತಾದಂತೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಯುನೈಟೆಡ್‌ ಕಿಂಗ್ಡಮ್‌ ನಲ್ಲಿ ರಿಪಬ್ಲಿಕ್‌ ಭಾರತ್‌ ವಾಹಿನಿಯ ಪ್ರಸಾರವನ್ನು ನಿಲ್ಲಿಸಲಾಗಿದೆ ಎಂದು ಬ್ರಿಟಿಷ್‌ ಮಾಧ್ಯಮ ವರದಿ ಮಾಡಿದ್ದಾಗಿ jantakareporter ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಈಗಾಗಲೇ ರಿಪಬ್ಲಿಕ್‌ ಭಾರತ್‌ ವಾಹಿನಿಯು ದ್ವೇಷ ಭಾಷಣ ಪ್ರಸಾರ ಮಾಡಿದ್ದಕ್ಕಾಗಿ ಬ್ರಿಟಿಷ್‌ ಮಾಧ್ಯಮ ನಿಯಂತ್ರಣ ಸಂಸ್ಥೆಯು 20,000 ಯೂರೋ ದಂಡ ವಿಧಿಸಿತ್ತು. ಯುಕೆ ಮೂಲದ ವೆಬ್‌ ಸೈಟ್‌ ಬಿಝ್‌ ಏಶ್ಯಾ ಪ್ರಕಾರ, "ಭಾರತದಲ್ಲಿ ಪ್ರಸಿದ್ಧಿ ಪಡೆದಿದ್ದ ರಿಪಬ್ಲಿಕ್‌ ಭಾರತ್ ಟಿವಿ ಚಾನೆಲ್‌ ಸದ್ಯ ಶೂನ್ಯ ಮಟ್ಟದಲ್ಲಿ ಪ್ರಸಾರವಾಗುತ್ತಿದೆ. ಸ್ಕೈ ನೆಟ್‌ ವರ್ಕ್‌ ನ  EPG 708 ಸಂಖ್ಯೆಯಲ್ಲಿ ರಿಪಬ್ಲಿಕ್‌ ಟಿವಿ ಕಾಣಿಸುತ್ತಿಲ್ಲ. ಇದು ವಾಹಿನಿಗಳ ಪಟ್ಟಿಯಿಂದ ತೆರವಾಗುತ್ತಿದೆ. ರಿಪಬ್ಲಿಕ್‌ ಭಾರತ್‌ ಮರಳಿ ಯುಕೆಯಲ್ಲಿ ಪ್ರಸಾರವಾಗಬಹುದು ಎನ್ನುವುದರ ಕುರಿತು ಸ್ಪಷ್ಟತೆಯಿಲ್ಲ" ಎಂದು ವರದಿ ಮಾಡಿದ್ದಾಗಿ ತಿಳಿದು ಬಂದಿದೆ.

ಸ್ಕೈ ಕಂಪೆನಿಯ ವೆಬ್‌ ಸೈಟ್‌ ನ ವಾಹಿನಿಗಳ ಕಾರ್ಯಕ್ರಮದ ಪಟ್ಟಿಯಲ್ಲಿ ಆಜ್‌ ತಕ್.‌ ಸೋನಿ ಟಿವಿ, ಝೀ ಟಿವಿ, ಕಲರ್ಸ್‌ ಟಿವಿಗಳು ಕಾಣಸಿಕ್ಕರೆ, ರಿಪಬ್ಲಿಕ್‌ ಭಾರತ್‌ ಪಟ್ಟಿಯಲ್ಲಿ ಇಲ್ಲ ಎಂದು ವರದಿ ತಿಳಿಸಿದೆ. 

ಈ ಕುರಿತಾದಂತೆ ರಿಪಬ್ಲಿಕ್‌ ಮೀಡಿಯಾ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ. ಒಂದು ತಿಂಗಳಿನಿಂದ ತಮ್ಮ ವಾಹಿನಿಯಲ್ಲಿ ಅರ್ನಬ್‌ ಗೋಸ್ವಾಮಿ ಕಾಣದೇ ಇರುವುದರ ಕುರಿತಾದಂತೆ ಸಾಮಾಜಿಕ ತಾಣದಾದ್ಯಂತ ಚರ್ಚೆ ನಡೆಯುತ್ತಿರುವ ಮಧ್ಯೆಯೇ ಈ ಸುದ್ದಿ ಸದ್ದು ಮಾಡಿದೆ ಎಂದು ವರದಿ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News