ಸೌರವ್ ಗಂಗುಲಿ ಅವರ 25 ವರ್ಷದ ದಾಖಲೆಯನ್ನು ಮುರಿದ ನ್ಯೂಝಿಲ್ಯಾಂಡ್ ಬ್ಯಾಟ್ಸ್ ಮನ್

Update: 2021-06-03 07:15 GMT
 (Photo | AFP)

ಲಂಡನ್: ನ್ಯೂಝಿಲ್ಯಾಂಡ್ ಬ್ಯಾಟ್ಸ್ ಮನ್  ಡೆವೊನ್ ಕಾನ್ವೇ  ಲಾರ್ಡ್ಸ್ ಕ್ರೀಡಾಂಗಣದಲ್ಲಿ ಆಡಿರುವ ತನ್ನ  ಚೊಚ್ಚಲ ಪಂದ್ಯದಲ್ಲಿ ಶತಕವನ್ನು ಸಿಡಿಸುವುದರೊಂದಿಗೆ ಭಾರತದ ಮಾಜಿ ನಾಯಕ ಸೌರವ್ ಗಂಗುಲಿ ನಿರ್ಮಿಸಿರುವ  25 ವರ್ಷದ ಹಳೆಯ ದಾಖಲೆಯೊಂದನ್ನು ಮುರಿದಿದ್ದಾರೆ.

ಕನ್ವೇ ಅವರು  ಲಾರ್ಡ್ಸ್ ನಲ್ಲಿ  ಆಡಿರುವ ಚೊಚ್ಚಲ ಪಂದ್ಯದಲ್ಲಿ ಶತಕ ಬಾರಿಸಿದ ಆರನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ  ದಿನದಂದು ಕಾನ್ವೇ ಈ ಸಾಧನೆ ಮಾಡಿದ್ದಾರೆ. ಎಡಗೈ ಬ್ಯಾಟ್ಸ್‌ಮನ್ ಕಾನ್ವೇ ಅಜೇಯ 136 ರನ್ ಗಳಿಸಿ ನ್ಯೂಝಿಲ್ಯಾಂಡ್ ತಂಡವನ್ನು ಸುಸ್ಥಿತಿಗೆ  ತಲುಪಿದರು. ಬುಧವಾರ ಮೊದಲ ದಿನದಾಟದಂತ್ಯಕ್ಕೆ ನ್ಯೂಝಿಲ್ಯಾಂಡ್ 3 ವಿಕೆಟ್ ನಷ್ಟಕ್ಕೆ  246 ರನ್ ಗಳಿಸಿತ್ತು.

ಗಂಗುಲಿ 1996 ರಲ್ಲಿ ಲಾರ್ಡ್ಸ್‌ನಲ್ಲಿ ಆಡಿದ್ದ ತನ್ನ  ಚೊಚ್ಚಲ ಟೆಸ್ಟ್  ಪಂದ್ಯದಲ್ಲಿ 131 ರನ್ ಗಳಿಸಿದ್ದರು, ಬುಧವಾರದ ಪಂದ್ಯದಲ್ಲಿ ಕಾನ್ವೇ  ಅಜೇಯ 136 ರನ್ ಗಳಿಸುವ ತನಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ  ಚೊಚ್ಚಲ ಪಂದ್ಯದಲ್ಲಿ ಅತ್ಯಧಿಕ ಸ್ಕೋರ್ ಗಳಿಸಿದ ಸಾಧನೆ ಗಂಗುಲಿ ಅವರ ಹೆಸರಲ್ಲಿತ್ತು.

ಈ ಶತಕದೊಂದಿಗೆ ಲಾರ್ಡ್ಸ್‌ನಲ್ಲಿ ಚೊಚ್ಚಲ ಟೆಸ್ಟ್  ಪಂದ್ಯದಲ್ಲಿ ಶತಕ ಗಳಿಸಿದ ಮೂರನೇ  ಇಂಗ್ಲೆಂಡ್  ಯೇತರ  ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಕಾನ್ವೇ ಪಾತ್ರರಾದರು. ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಹ್ಯಾರಿ ಗ್ರಹಾಂ 1893 ರಲ್ಲಿ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 107 ರನ್ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News