ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿರುವ ಕುಸ್ತಿಪಟು ಸುಮಿತ್ ಮಲಿಕ್ ಡೋಪಿಂಗ್ ಪರೀಕ್ಷೆಯಲ್ಲಿ ವಿಫಲ

Update: 2021-06-04 09:35 GMT

ಹೊಸದಿಲ್ಲಿ, ಜೂ.4: ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕೆಲವೇ  ವಾರಗಳು ಬಾಕಿ ಇರುವಾಗ ದೇಶಕ್ಕೆ ದೊಡ್ಡ ಮುಜುಗರದ ಸುದ್ದಿಯೊಂದು ವರದಿಯಾಗಿದೆ.  ಬಲ್ಗೇರಿಯಾದಲ್ಲಿ ಇತ್ತೀಚೆಗೆ ನಡೆದ ಕ್ವಾಲಿಫೈಯರ್ಸ್‌ನಲ್ಲಿ ಉದ್ದೀಪನಾ  ಮದ್ದು ಪರೀಕ್ಷೆಯಲ್ಲಿ ವಿಫಲವಾದ ಒಲಿಂಪಿಕ್ಸ್  ತಂಡದ ಭಾರತೀಯ ಕುಸ್ತಿಪಟು ಸುಮಿತ್  ಮಲಿಕ್ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ.

ಒಲಿಂಪಿಕ್ಸ್‌ಗೆ ಮುಂಚಿತವಾಗಿ ಭಾರತೀಯ ಕುಸ್ತಿಪಟುವೊಬ್ಬರು  ಉದ್ದೀಪನಾ ಮದ್ದು ಪರೀಕ್ಷೆಯಲ್ಲಿ ವಿಫಲವಾಗಿರುವ ಸತತ ಎರಡನೇ ನಿದರ್ಶನ ಇದಾಗಿದೆ. 2016 ರ ರಿಯೊ ಒಲಿಂಪಿಕ್ಸ್‌ಗೆ ಮುಂಚಿತವಾಗಿ ನರಸಿಂಗ್ ಪಂಚಮ್ ಯಾದವ್ ಕೂಡ ಡೋಪಿಂಗ್ ಪರೀಕ್ಷೆಯಲ್ಲಿ ವಿಫಲವಾಗಿದ್ದರು. ಆಗ  ಅವರಿಗೆ  ನಾಲ್ಕು ವರ್ಷಗಳ  ಕಾಲ ನಿಷೇಧ ಹೇರಲಾಗಿತ್ತು.

2018 ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದ ಮಲಿಕ್, ಬಲ್ಗೇರಿಯಾ ಸ್ಪರ್ಧೆಯಲ್ಲಿ 125 ಕೆಜಿ ವಿಭಾಗದಲ್ಲಿ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು. ಇದು ಕುಸ್ತಿಪಟುಗಳಿಗೆ  ಒಲಿಂಪಿಕ್ಸ್ ಕೋಟಾ ಗಳಿಸಲು  ಕೊನೆಯ ಅವಕಾಶವಾಗಿತ್ತು. ಜುಲೈ 23 ರಿಂದ ಆರಂಭವಾಗುವ ಒಲಿಂಪಿಕ್ಸ್ ನಲ್ಲಿ  ಸ್ಪರ್ಧಿಸುವ 28 ವರ್ಷದ ಮಲಿಕ್ ಅವರ ಕನಸು ಭಗ್ನವಾಗುವ ಸಾಧ್ಯತೆಯೂ ಇದೆ.

"ಯುಡಬ್ಲ್ಯೂಡಬ್ಲ್ಯೂ (ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್) ನಿನ್ನೆ ಭಾರತದ ಕುಸ್ತಿ ಒಕ್ಕೂಟಕ್ಕೆ ಸುಮಿತ್ ಡೋಪ್ ಪರೀಕ್ಷೆಯಲ್ಲಿ ವಿಫಲವಾಗಿದ್ದಾರೆ ಎಂದು ತಿಳಿಸಿತ್ತು. ಈಗ ಅವರು ಜೂನ್ 10 ರಂದು ತಮ್ಮ ಬಿ ಸ್ಯಾಂಪಲ್ ನೀಡಬೇಕಾಗಿದೆ" ಎಂದು ಡಬ್ಲ್ಯುಎಫ್ಐ ಮೂಲವು ಪಿಟಿಐಗೆ ತಿಳಿಸಿದೆ.

ವಿವಿಧ ಸ್ಥಳಗಳಲ್ಲಿ ಒಲಿಂಪಿಕ್ಸ್  ಅರ್ಹತಾ ಪಂದ್ಯಗಳು ಆರಂಭವಾಗುವ ಮೊದಲು ರಾಷ್ಟ್ರೀಯ ಶಿಬಿರದಲ್ಲಿ ಮಲಿಕ್ ಅವರು ಮೊಣಕಾಲಿನ ಗಾಯಕ್ಕೆ  ಚಿಕಿತ್ಸೆ ಪಡೆದಿದ್ದರು.

ಮೇನಲ್ಲಿ ಸೋಫಿಯಾದಲ್ಲಿ ನಡೆದ ವಿಶ್ವ ಒಲಿಂಪಿಕ್ಸ್  ಅರ್ಹತಾ ಪಂದ್ಯಗಳಲ್ಲಿ ಮಲಿಕ್ ಫೈನಲ್ ತಲುಪುವ ಮೂಲಕ ಒಲಿಂಪಿಕ್ಸ್ ಕೋಟಾವನ್ನು ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News