ಫಿಕ್ಸಿಂಗ್ ಶಂಕೆ: ರಶ್ಯದ ಟೆನಿಸ್ ಆಟಗಾರ್ತಿ ಸಿಝಿಕೋವಾರನ್ನು ಬಂಧಿಸಿದ ಪ್ಯಾರಿಸ್ ಪೊಲೀಸ್

Update: 2021-06-04 10:36 GMT
photo: tellerreport.

ಪ್ಯಾರಿಸ್, ಜೂ.4: ಕಳೆದ ವರ್ಷ ನಡೆದ ಫ್ರೆಂಚ್ ಓಪನ್‌ ಟೆನಿಸ್ ಟೂರ್ನಿಯ ವೇಳೆ  ನಡೆದ ಡಬಲ್ಸ್ ಪಂದ್ಯ ಫಿಕ್ಸ್ ಮಾಡಿದ ಶಂಕೆಯ ಮೇರೆಗೆ  ಪ್ಯಾರಿಸ್ ಪೊಲೀಸರು ರಶ್ಯದ ಟೆನಿಸ್ ಆಟಗಾರ್ತಿ ಯಾನಾ ಸಿಝಿಕೋವಾ ಅವರನ್ನು ಶುಕ್ರವಾರ ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸರು ಮತ್ತು ಕಾನೂನು ಮೂಲಗಳು ಎಎಫ್‌ಪಿಗೆ ತಿಳಿಸಿವೆ.

ಭ್ರಷ್ಟಾಚಾರ ಹಾಗೂ  ವಂಚನೆ ಕುರಿತ ತನಿಖೆಯ ಭಾಗವಾಗಿ ಮಹಿಳಾ ಡಬಲ್ಸ್ ಶ್ರೇಯಾಂಕದಲ್ಲಿ 101 ನೇ ಸ್ಥಾನದಲ್ಲಿರುವ ಸಿಝಿಕೋವಾ (26 ವರ್ಷ) ಅವರನ್ನು ಈ ವರ್ಷದ ಪಂದ್ಯಾವಳಿಯಲ್ಲಿ ಆಡಿದ   ನಂತರ ಗುರುವಾರ ರಾತ್ರಿ ಬಂಧಿಸಲಾಯಿತು ಎಂದು ಪ್ಯಾರಿಸ್ ಪ್ರಾಸಿಕ್ಯೂಟರ್ ಕಚೇರಿಯ ಮೂಲಗಳು  ತಿಳಿಸಿವೆ.

ಕಳೆದ ವರ್ಷ ಮಹಿಳೆಯರ ಸಿಂಗಲ್ಸ್ ನ ಮೊದಲ ಸುತ್ತಿನ ಪಂದ್ಯದಲ್ಲಿ ಸಿಝಿಕೋವಾ ಹಾಗೂ ಅವರ ಅಮೆರಿಕದ ಜೊತೆಗಾರ್ತಿ ಮ್ಯಾಡಿಸನ್ ಬ್ರೆಂಗ್ಲೆ ಅವರು ರೊಮಾನಿಯದ ಜೋಡಿ ಅಂಡ್ರಿಯಾ ಮಿಟು ಹಾಗೂ ಪ್ಯಾಟ್ರಿಸಿಯಾ ಮರಿಯಾ ವಿರುದ್ಧ ಸೋತಿದ್ದರು. ಈ ಪಂದ್ಯದ ಕುರಿತಾಗಿಯೇ  ಕಳೆದ ಅಕ್ಟೋಬರ್ ನಲ್ಲಿ ಸಂಭಾವ್ಯ ಭ್ರಷ್ಟಾಚಾರ ಹಾಗೂ ವಂಚನೆ ಬಗ್ಗೆ ತನಿಖೆ ಆರಂಭಿಸಲಾಗಿತ್ತು.

ಗುರುವಾರ ನಡೆದ ಡಬಲ್ಸ್ ಪಂದ್ಯದಲ್ಲಿ ಸಿಝಿಕೋವಾ ಹಾಗೂ ಅವರ ಹೊಸ ಜೊತೆಗಾರ್ತಿ ಎಕಟೆರಿನಾ ಅಲೆಕ್ಸಾಂಡ್ರೋವಾ ಆಸ್ಟ್ರೇಲಿಯದ ಜೋಡಿ ಸ್ಟೋರ್ಮ್ ಸ್ಯಾಂಡರ್ಸ್ ಹಾಗೂ ಅಜ್ಲಾ ಟೋಮ್ ಜಾಂಕೊವಿಕ್  ವಿರುದ್ಧ ಮೊದಲ ಸುತ್ತಿನಲ್ಲಿ 1-6, 1-6 ಅಂತರದಿಂದ ಹೀನಾಯವಾಗಿ ಸೋತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News